Monday, February 2, 2009

ಹಳ್ಳಿ ಹೈದನ ಅಂಬಾರಿ...!


ಇದಕ್ಕೆ ನಮ್ಮವರ ಮೇಲಿನ ಅಭಿಮಾನ ಕಾರಣ.
ನಮ್ಮ ಊರಿನವರು, ನಮ್ಮ ಜಿಲ್ಲೆಯವರು, ರಾಜ್ಯದವರು ಏನಾದರೂ ಸಾಧನೆ ಮಾಡಿದರೆ ನಾವೇ ಮಾಡಿದಷ್ಟು ಖುಷಿಯಾಗುತ್ತದೆ. ಈ ಖುಷಿಯ ಸಾಲಿಗೆ ಮೊನ್ನೆಯಷ್ಟೇ ಬಿಡುಗಡೆಯಾಗಿರವ ಅಂಬಾರಿ ಚಿತ್ರ ಕಾರಣವಾಗಿದೆ. ಏಕೆಂದರೆ, ಈ ಚಿತ್ರದ ನಿರ್ದೇಶಕ ನನ್ನ ಜಿಲ್ಲೆ ಸಕ್ಕರೆ ನಾಡು ಮಂಡ್ಯದ ಹುಡುಗ ಎ.ಪಿ. ಅರ್ಜುನ್ (ಅವರ ಹೆಸರು ಅನಂತ ಎಂದು ಅರ್ಜುನ್ ಆಗಿ ಬದಲಾಗಿದ್ದಾರೆ!). ನಮ್ಮೂರು ಪಂಚೇಗೌಡನದೊಡ್ಡಿಯ ಪಕ್ಕದ ಕೆರಗೋಡು ಗ್ರಾಮದವರು ಅವರು. ಅಂಬಾರಿ ಮೂಲಕ ಪ್ರೀತಿಯ ಜೊತೆಯಲ್ಲಿ ಉತ್ತಮ ಕಥೆಯೊಂದನ್ನು ಅವರು ಚಿತ್ರವಾಗಿ ಮಾಡಿದ್ದಾರೆ.
ಕಥೆ-ಚಿತ್ರಕಥೆ- ಸಂಭಾಷಣೆ- ಸಾಹಿತ್ಯ-ನಿರ್ದೇಶನದ ಅಂಬಾರಿಯನ್ನು ಹೊತ್ತಿರುವ ಅರ್ಜುನ್, ಚಿತ್ರದ ಮೂಲಕ
ಹೃದಯ ತಟ್ಟುತ್ತಾರೆ. ಪ್ರಥಮ ಪ್ರಯತ್ನದಲ್ಲಿಯೇ ಅವರು ಯುವಸಮೂಹವನ್ನು ಕಾಡಿದ್ದಾರೆ.
ಚಪ್ಪಲಿ ಹೊಲಿಯುವ ಯುವಕನನ್ನು ಸಹ ಹುಡುಗಿಯೊಬ್ಬಳು ಪ್ರೀತಿಸುತ್ತಾಳೆ. ಪ್ರೀತಿ ಕುರುಡು ಎಂಬುದು ಅಂಬಾರಿ
ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಉತ್ತಮ ಸಂಭಾಷಣೆ ಹಾಗೂ ಸಾಹಿತ್ಯದ ಮೂಲಕ ಅರ್ಜುನ್ ಇಷ್ಟವಾಗುತ್ತಾರೆ.
ಈ ಹೃದಯವನ್ನು ನೀನು ಇಷ್ಟು ದಿನ ನಡೆಸಿದ್ದೀಯಾ, ಇನ್ನು ನೀನು ಕೈ ಹಿಡಿದು ಕೈನಡೆಸದಿದ್ದರೆ ಹೃದಯವೇ ನಿಂತು ಹೋಗುತ್ತದೆ ಎಂಬ ಭಾವನಾತ್ಮಕ ಸಂಭಾಷಣೆ ಅರ್ಜುನ್ ಪೆನ್ನಿಂದ ಮೂಡಿಬಂದಿವೆ. ಎಂತಹ ಕಲ್ಪನೆಯಲ್ಲವೇ?
ಪ್ರೇಕ್ಷಕರನ್ನು ಎರಡೂವರೆ ಗಂಟೆ ಕಾಲ ಅವರು ಪ್ರೀತಿಯ ಜೊತೆಯಲ್ಲಿ ಕರೆದೊಯ್ಯುತ್ತಾರೆ. ನಡುವೆ ವಿಲನ್‌ಗಳನ್ನು ಬಿಟ್ಟು ಪ್ರೇಮಿಗಳಿಗೆ ಕಾಟ ಕೊಡುತ್ತಾರೆ. ಪೊಲೀಸರ ಅನಾಗರಿಕ ವರ್ತನೆಗೆ ಅಂಬಾರಿಯಲ್ಲಿ ಕನ್ನಡಿ ಇದೆ. ಅಂಥಹ ಪೋಲೀಸರನ್ನು ಕಂಡರೆ ಕೊಲ್ಲುವಷ್ಟು ಕೋಪ ಬರದಿದ್ದರೆ ಕೇಳಿ?
ನಿರ್ದೇಶನ ಮಾತ್ರವಲ್ಲದೆ, ಕೆಲ ಹಾಡುಗಳನ್ನು ಸಹ ಅರ್ಜುನ್ ಕೇಳುವಂತೆ ಬರೆದಿದ್ದಾರೆ. ಅದಕ್ಕೆ ಸೊಗಸಾಗಿ ಹರಿಕೃಷ್ಣ
ಸಂಗೀತ ಸಂಯೋಜಿಸಿದ್ದಾರೆ. ಹಳ್ಳಿ ಹೈದನ ಪ್ರಥಮ ಪ್ರಯತ್ನವನ್ನು ನೀವೂ ನೋಡಿ. ಇಷ್ಟವಗದಿದ್ದರೆ ಕೇಳಿ.
(ಅಂದ ಹಾಗೆ ಅರ್ಜುನ್ ನನಗಿಂತ ಎರಡು ಕ್ಲಾಸ್ ದೊಡ್ಡವರು. ಅವರ ಬಗ್ಗೆ ನನಗೆ ಗೊತ್ತು. ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ. ಆದ್ದರಿಂದ ಇದನ್ನು ಬರೆದದ್ದೂ ಸಹ ಅವರಿಗೆ ಗೊತ್ತಾಗುವುದಿಲ್ಲ. ನಮ್ಮೂರಿನ ಹುಡುಗ ಎಂಬ ಅಭಿಮಾನ ಈ ನಾಲ್ಕು ಮಾತುಗಳನ್ನು ಬರೆಸಿದೆ. ಪ್ರೀತಿಯಿಂದ ಅಂಬಾರಿ ನೋಡಿ. ಯುವಕರಿಗೆ ಪ್ರೆತ್ಸಾಹ ಕೊಟ್ಟಂತಾಗುತ್ತದೆ.)