Thursday, May 14, 2009

ಭಾರತ ತೊಂದರೆಯಲ್ಲಿದೆ ಏಕೆ ?!


ಭಾರತ ತೊಂದರೆಯಲ್ಲಿದೆ ಏಕೆ ?!
ಈ ಪ್ರಶ್ನೆಗೆ ಉತ್ತರವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಅದನ್ನು ನಾನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ...
ನಮ್ಮ ದೇಶದ ಸ್ಥಿತಿ ನೋಡಿ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ ! ಜೈ ಹೋ...

ಏನಪ್ಪಾ ಅಂದ್ರೆ...
ದೇಶದಲ್ಲಿ ೧೦೦ ಕೋಟಿ ಜನಸಂಖ್ಯೆ ಇದೆ.
ಅದರಲ್ಲಿ ೯ ಕೋಟಿ ಮಂದಿ ನಿವೃತ್ತರು !
೩೦ ಕೋಟಿ ಮಂದಿ ರಾಜ್ಯ ಸರ್ಕಾರದಲ್ಲಿ ಇದ್ದಾರೆ; ೧೭ ಕೋಟಿ ಮಂದಿ ಕೇಂದ್ರ ಸರ್ಕಾರದಲ್ಲಿ ಇದ್ದಾರೆ. (ಎರಡೂ ವರ್ಗ ಕೆಲಸ ಮಾಡುವುದಿಲ್ಲ )
೧ ಕೋಟಿ ಐಟಿ ವೃತ್ತಿಪರರು (ಇವರು ಭಾರತ ದೇಶಕ್ಕಾಗಿ ಕೆಲಸ ಮಾಡುವುದಿಲ್ಲ )
೨೫ ಕೋಟಿ ಮಂದಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
೧ ಕೋಟಿ ಮಂದಿ ೫ ವರ್ಷ ಕೆಳಗಿನವರು.
೧೫ ಕೋಟಿ ಮಂದಿಗೆ ಉದ್ಯೋಗ ಸಿಕ್ಕಿಲ್ಲ.
ವಿವಿಧ ಕಾಯಿಲೆಯಿಂದ ೧.೨ ಕೋಟಿ ಮಂದಿ ಯಾವಾಗಲೂ ಆಸ್ಪತ್ರೆಯಲ್ಲಿ ಇರುತ್ತಾರೆ.
ಸಮೀಕ್ಷೆಗಳ ಪ್ರಕಾರ... ೭೯,೯೯,೯೯೮ ಮಂದಿ ಸದಾ ಜೈಲಿನಲ್ಲಿ ವಾಸಿಗಳು.
ಇನ್ನು ಉಳಿದವರು... ನಾನು ಮತ್ತು ನೀವು...
ನೀವೋ, ಕಂಪ್ಯೂಟರ್ ಮುಂದೆ ಕುಳಿತು ಮೇಲ್ ಚೆಕ್ ಮಾಡ್ತಾ ಇದ್ದೀರಾ... ಬ್ಲಾಗ್ ನೋಡ್ತಾ ಇದ್ದೀರಾ.
ಇನ್ನು ನಾನೊಬ್ಬ ಹೇಗೆ ಭಾರತವನ್ನು ಹ್ಯಾಂಡಲ್ ಮಾಡಲಿ, ನೀವೇ ಹೇಳಿ...!?Monday, February 2, 2009

ಹಳ್ಳಿ ಹೈದನ ಅಂಬಾರಿ...!


ಇದಕ್ಕೆ ನಮ್ಮವರ ಮೇಲಿನ ಅಭಿಮಾನ ಕಾರಣ.
ನಮ್ಮ ಊರಿನವರು, ನಮ್ಮ ಜಿಲ್ಲೆಯವರು, ರಾಜ್ಯದವರು ಏನಾದರೂ ಸಾಧನೆ ಮಾಡಿದರೆ ನಾವೇ ಮಾಡಿದಷ್ಟು ಖುಷಿಯಾಗುತ್ತದೆ. ಈ ಖುಷಿಯ ಸಾಲಿಗೆ ಮೊನ್ನೆಯಷ್ಟೇ ಬಿಡುಗಡೆಯಾಗಿರವ ಅಂಬಾರಿ ಚಿತ್ರ ಕಾರಣವಾಗಿದೆ. ಏಕೆಂದರೆ, ಈ ಚಿತ್ರದ ನಿರ್ದೇಶಕ ನನ್ನ ಜಿಲ್ಲೆ ಸಕ್ಕರೆ ನಾಡು ಮಂಡ್ಯದ ಹುಡುಗ ಎ.ಪಿ. ಅರ್ಜುನ್ (ಅವರ ಹೆಸರು ಅನಂತ ಎಂದು ಅರ್ಜುನ್ ಆಗಿ ಬದಲಾಗಿದ್ದಾರೆ!). ನಮ್ಮೂರು ಪಂಚೇಗೌಡನದೊಡ್ಡಿಯ ಪಕ್ಕದ ಕೆರಗೋಡು ಗ್ರಾಮದವರು ಅವರು. ಅಂಬಾರಿ ಮೂಲಕ ಪ್ರೀತಿಯ ಜೊತೆಯಲ್ಲಿ ಉತ್ತಮ ಕಥೆಯೊಂದನ್ನು ಅವರು ಚಿತ್ರವಾಗಿ ಮಾಡಿದ್ದಾರೆ.
ಕಥೆ-ಚಿತ್ರಕಥೆ- ಸಂಭಾಷಣೆ- ಸಾಹಿತ್ಯ-ನಿರ್ದೇಶನದ ಅಂಬಾರಿಯನ್ನು ಹೊತ್ತಿರುವ ಅರ್ಜುನ್, ಚಿತ್ರದ ಮೂಲಕ
ಹೃದಯ ತಟ್ಟುತ್ತಾರೆ. ಪ್ರಥಮ ಪ್ರಯತ್ನದಲ್ಲಿಯೇ ಅವರು ಯುವಸಮೂಹವನ್ನು ಕಾಡಿದ್ದಾರೆ.
ಚಪ್ಪಲಿ ಹೊಲಿಯುವ ಯುವಕನನ್ನು ಸಹ ಹುಡುಗಿಯೊಬ್ಬಳು ಪ್ರೀತಿಸುತ್ತಾಳೆ. ಪ್ರೀತಿ ಕುರುಡು ಎಂಬುದು ಅಂಬಾರಿ
ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಉತ್ತಮ ಸಂಭಾಷಣೆ ಹಾಗೂ ಸಾಹಿತ್ಯದ ಮೂಲಕ ಅರ್ಜುನ್ ಇಷ್ಟವಾಗುತ್ತಾರೆ.
ಈ ಹೃದಯವನ್ನು ನೀನು ಇಷ್ಟು ದಿನ ನಡೆಸಿದ್ದೀಯಾ, ಇನ್ನು ನೀನು ಕೈ ಹಿಡಿದು ಕೈನಡೆಸದಿದ್ದರೆ ಹೃದಯವೇ ನಿಂತು ಹೋಗುತ್ತದೆ ಎಂಬ ಭಾವನಾತ್ಮಕ ಸಂಭಾಷಣೆ ಅರ್ಜುನ್ ಪೆನ್ನಿಂದ ಮೂಡಿಬಂದಿವೆ. ಎಂತಹ ಕಲ್ಪನೆಯಲ್ಲವೇ?
ಪ್ರೇಕ್ಷಕರನ್ನು ಎರಡೂವರೆ ಗಂಟೆ ಕಾಲ ಅವರು ಪ್ರೀತಿಯ ಜೊತೆಯಲ್ಲಿ ಕರೆದೊಯ್ಯುತ್ತಾರೆ. ನಡುವೆ ವಿಲನ್‌ಗಳನ್ನು ಬಿಟ್ಟು ಪ್ರೇಮಿಗಳಿಗೆ ಕಾಟ ಕೊಡುತ್ತಾರೆ. ಪೊಲೀಸರ ಅನಾಗರಿಕ ವರ್ತನೆಗೆ ಅಂಬಾರಿಯಲ್ಲಿ ಕನ್ನಡಿ ಇದೆ. ಅಂಥಹ ಪೋಲೀಸರನ್ನು ಕಂಡರೆ ಕೊಲ್ಲುವಷ್ಟು ಕೋಪ ಬರದಿದ್ದರೆ ಕೇಳಿ?
ನಿರ್ದೇಶನ ಮಾತ್ರವಲ್ಲದೆ, ಕೆಲ ಹಾಡುಗಳನ್ನು ಸಹ ಅರ್ಜುನ್ ಕೇಳುವಂತೆ ಬರೆದಿದ್ದಾರೆ. ಅದಕ್ಕೆ ಸೊಗಸಾಗಿ ಹರಿಕೃಷ್ಣ
ಸಂಗೀತ ಸಂಯೋಜಿಸಿದ್ದಾರೆ. ಹಳ್ಳಿ ಹೈದನ ಪ್ರಥಮ ಪ್ರಯತ್ನವನ್ನು ನೀವೂ ನೋಡಿ. ಇಷ್ಟವಗದಿದ್ದರೆ ಕೇಳಿ.
(ಅಂದ ಹಾಗೆ ಅರ್ಜುನ್ ನನಗಿಂತ ಎರಡು ಕ್ಲಾಸ್ ದೊಡ್ಡವರು. ಅವರ ಬಗ್ಗೆ ನನಗೆ ಗೊತ್ತು. ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ. ಆದ್ದರಿಂದ ಇದನ್ನು ಬರೆದದ್ದೂ ಸಹ ಅವರಿಗೆ ಗೊತ್ತಾಗುವುದಿಲ್ಲ. ನಮ್ಮೂರಿನ ಹುಡುಗ ಎಂಬ ಅಭಿಮಾನ ಈ ನಾಲ್ಕು ಮಾತುಗಳನ್ನು ಬರೆಸಿದೆ. ಪ್ರೀತಿಯಿಂದ ಅಂಬಾರಿ ನೋಡಿ. ಯುವಕರಿಗೆ ಪ್ರೆತ್ಸಾಹ ಕೊಟ್ಟಂತಾಗುತ್ತದೆ.)

Thursday, January 29, 2009

ಅವಸರವಿದ್ದಾಗ !

ನಮಗೆ ಅವಸರವಿದ್ದಾಗ ಎಲ್ಲ ವಾಹನಗಳು ನಿಧಾನಕ್ಕೆ ಹೋಗುತ್ತಿವೆ ಅನ್ನಿಸುತ್ತೆ ಯಾಕೆ?!

Saturday, January 17, 2009

ಯಾವ ಮೋಹನ ಮುರಳಿ ಕರೆಯಿತು...!?


ಇನ್ನೂ ಅದೆಷ್ಟು ಸಾವುಗಳನ್ನು ನೋಡಬೇಕೋ ನಾವು..!
ಆಗ ಪೂರ್ಣಚಂದ್ರ ತೇಜಸ್ವಿ. ಈಗ ನೆಚ್ಚಿನ ಗಾಯಕ ರಾಜು ಅನಂತಸ್ವಾಮಿ. ದಿಗಿಲಾಗುತ್ತದೆ. ಇನ್ನು ಬಾಳಿ ಬದುಕುವ
ವಯಸ್ಸಿರುವವರನ್ನು ಜವರಾಯ ತನ್ನ ಬಳಿಗೆ ಕರೆದುಕೊಳ್ಳುತ್ತಾನೆ ಎಂದರೆ ಏನರ್ಥ?! ತಪ್ಪು ನಮ್ಮದೋ, ಜವರಾಯನದೋ? ಸಾವು ಮಾತ್ರ ಯಾರನ್ನೂ ಬಿಟ್ಟಿಲ್ಲ; ಬಿಡುವುದೂ ಇಲ್ಲ.


ಹಾಡುವಾಗಲಾಗಲೀ, ಮಾತನಾಡುವಾಗಲಾಗಲೀ, ಕುಡಿಯುವಾಗಲಾಗಲೀ ಸದಾ ನಗುತ್ತಿದ್ದ ಪ್ರೀತಿಯ ರಾಜು,
ಜೀವನ- ಗಾಯನ ಮುಗಿಸಿದ್ದಾರೆ. ನಟನೆ ಗೊತ್ತಿತ್ತು. ಗಾಯನ ಗೊತ್ತಿತ್ತು. ಎಂತಹ ಹಾಡುಗಳನ್ನು ಬೇಕಾದರೂ ಹಾಡುವ ಸಾಮರ್ಥ್ಯವಿದ್ದ ರಾಜು, ಸುಗಮ ಸಂಗೀತವನ್ನು ಬೆಳೆಸಲು ಶ್ರಮಿಸುತ್ತಿದ್ದರು. ತಂದೆ ಮೈಸೂರು ಅನಂತಸ್ವಾಮಿ
ಪ್ರೇರಣೆಯಲ್ಲಿಯೇ ಕಾಯಕ ನಿರ್ವಹಿಸುತ್ತಿದ್ದ ರಾಜು ಇನ್ನು ನೆನಪು ಮಾತ್ರ ಎಂಬುದನ್ನು ನೆನೆಸಿಕೊಂಡರೆ....
------------
ಸುಗಮ ಸಂಗೀತ ಶಾಲೆ ಈಗ ಅನಾಥ!
ತಂದೆ ಮೈಸೂರು ಅನಂತಸ್ವಾಮಿಯವರ ಸ್ಮರಣಾರ್ಥ ತೆರೆದಿದ್ದ ಸುಗಮ ಸಂಗೀತ ಶಾಲೆ ಕೂಸಿನಲ್ಲಿಯೇ ಅನಾಥವಾಗಿದೆ. ಸ್ಥಾಪಕನನ್ನು ಕಳೆದುಕಂಡ ದುಃಖದಲ್ಲಿದೆ. ೧೫-೨೦ ವರ್ಷಗಳ ಕಾಲ ಸುಗಮ ಸಂಗೀತ ಕ್ಷತ್ರದಲ್ಲಿ ಗಾಯಕ, ನಿರ್ದೇಶಕ, ಸಂಗೀತ ಸಂಯೋಕರಾಗಿ ಮಾತ್ರವಲ್ಲದ, ಚಲನಚಿತ್ರಗಳಲ್ಲಿ ಹಾಸ್ಯನಟರಾಗಿಯೂ ಖ್ಯಾತಿ ಗಳಿಸಿದ್ದು ರಾಜು ಅನಂತಸ್ವಾಮಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸುಗಮ ಸಂಗೀತ ಕಲಿಕಾ ತರಗತಿಗಳನ್ನು ಆರಂಭಿಸಿದ್ದರು. ಇದು ೨೦೦೭ರ ಮೇ ೧೯ ರಿಂದ ಆರಂಭವಾಗಿತ್ತು. ಸುಗಮ ಸಂಗೀತದ ಆಸಕ್ತಿ ಇರುವ
ಮಕ್ಕಳಿಗೆ ಖುದ್ದು ರಾಜುವೇ ಪಾಠ ಹೇಳುತ್ತಿದ್ದರು. ಇದರೊಂದಿಗೆ ಒಂದಷ್ಟು ಮಕ್ಕಳಿಗೆ ನಗುವ ಗುರುವಿನ ಸಾಂಗತ್ಯ ಸಿಕ್ಕಿತ್ತು. ಆದರೆ, ಒಂದಷ್ಟು ಮಕ್ಕಳಿಗೆ ಈ ಅವಕಾಶ ಲಭ್ಯವಾಗದಂತೆ ದೇವರೇ ಆಜ್ಞೆ ಹೊರಡಿಸಿದ್ದಾನೆ!
ಮಾತು ತಪ್ಪೆಲ್ಲ ಎಂದಿದ್ದರು...
ಅತಿಯಾದ ಮದ್ಯಪಾನದಿಂದಲೋ ಏನೋ ಆಗಾಗ ಆರೋಗ್ಯ ಕೈಕೊಡುತ್ತಿದ್ದುದರಿಂದ ಈ ಶಾಲೆ ಆರಂಭವೂ ವಿಳಂಬವಾಗಿತ್ತು. ೨೦೦೭ರ ಜನವರಿಯಲ್ಲಿ ಆರಂಭವಾಗಬೇಕಿದ್ದ ಶಾಲೆ, ಮೇನಲ್ಲಿ ಪ್ರಾರಂಭವಾಗಿತ್ತು. ಯಾವುದೇ ಸಮಾರಂಭ ಮಾಡದೇ, ಸರಳವಾಗಿ ಸರಸ್ವತಿ ಪೂಜೆ ಮಾಡಿ ಮುಗಿಸಿ, ಉದ್ಘಾಟನೆ ಮಾಡುವ ಮೂಲಕ ರಾಜು ಸರಳತೆಯನ್ನು ಪ್ರದರ್ಶಿಸಿದ್ದರು. ವದಲು ಅನಾರೋಗ್ಯದಿಂದಾಗಿ ಶಾಲೆ ಆರಂಭಿಸುವುದು ಸಾಧ್ಯವಾಗಿರಲಿಲ್ಲ. ಈ ಬಾರಿ ಮಾತು ತಪ್ಪೆಲ್ಲ ಎಂದಿದ್ದ ರಾಜು, ಮಾತು ಉಳಿಸಿಕಂಡಿದ್ದರು. ಈಗ ಅದೆಲ್ಲವನ್ನು ಬಿಟ್ಟಿದ್ದೇನೆ. ಇನ್ನು ಮುಂದೆ ಸಂಗೀತವಾಯಿತು; ನಾನಾಯಿತು ಎಂದು ಹೇಳಿದ್ದರಾದರೂ, ಹಾಗನು ಅವರು ನಡೆದುಕೊಳ್ಳಲಿಲ್ಲ. ಮದ್ಯಪಾನ ಅವರನ್ನು ಆವರಿಸಿತ್ತು. (ರಾಜು ಸಾವು ನಮ್ಮ ವಯಸ್ಸಿನಲ್ಲಿರುವ ಮದ್ಯಪ್ರಿಯರಿಗೆ ಪಾಠವೂ ಹೌದು!.)


೨೦೦೭ ರ ಏ.೩೦ ರಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ತಮ್ಮ ಶಾಲೆ ಆರಂಭದ ಬಗ್ಗೆ ಸುದ್ದಿಗೋಷ್ಠಿಗೆ ರಾಜು ಬಂದಿದ್ದರು. ಅಂದು ನಮ್ಮೆಲ್ಲರ ಒತ್ತಾಯದ ಮೇರೆಗೆ ಅಮೆರಿಕ ಅಮೆರಿಕ ಚಿತ್ರದ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ ಹಾಡು ಹಾಡಿದ್ದರು. ತಮ್ಮ ಹಾಡಿನ ಭಾಗವನ್ನು ಮಾತ್ರ ಹಾಡಿದ್ದ ರಾಜು, ಉಳಿದದ್ದನ್ನು ಸಂಗೀತಾ ಕಟ್ಟಿ ಬಂದಾಗ ಅವರಿಂದ ಹೇಳಿಸಿ ಎಂದು ಹೇಳಿ ನಗೆತರಿಸಿದ್ದರು!
ಆದರೆ ಈಗ ಬಯಸಿದರೂ ರಾಜು ಹಾಡುವುದಿಲ್ಲ.... ಈಗಾಗಲೇ ಹಾಡಿರುವ ಹಾಡುಗಳನ್ನು ಕೇಳಿಯೇ ಸಂತೋಷ ಪಡಬೇಕು ನಾವು. ರಾಜು... ಯಾವ ಮೋಹನ ಮುರಳಿ ಕರೆಯಿತು ದೂರು ತೀರಕೆ ನಿನ್ನನು....?