Monday, December 22, 2008

ಇದು ವ್ಯವಹಾರ ಅಂದ್ರೆ...!


ನಮಗೆ ಬರುವ ಈ - ಮೇಲ್ ಗಳಲ್ಲಿ ಹಲವಾರು ಕಥೆಗಳಿರುತ್ತವೆ; ಕವಿತೆಗಳಿರುತ್ತವೆ; ಆಶ್ಚರ್ಯ ತರಿಸುವ ಸಂಗತಿಗಳು
ಇರುತ್ತವೆ. ಮೊನ್ನೆ ನಮ್ಮ ಹರೀಶಣ್ಣ ಕಳುಹಿಸಿದ ಮೇಲ್‌ನಲ್ಲಿ ಅಚ್ಚರಿಯ ಸಾಲುಗಳಿದ್ದವು. ಅದನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ. ಓದಿ ನೋಡಿ, ನಿಮಗೂ ಇಷ್ಟವಾಗಬಹುದು...

ಬ್ಯುಸಿನೆಸ್ ಲಾಜಿಕ್ಸ್ ಹೀಗಿರಬೇಕಂತೆ....
- ಅಪ್ಪ: ನಾನು ಆಯ್ಕೆ ಮಾಡಿರುವ ಹುಡುಗಿಯನ್ನೇ ನೀನು ಮದುವೆಯಾಗಬೇಕು.
- ಮಗ: ನನ್ನ ಪತ್ನಿಯಾಗುವವಳನ್ನು ನಾನೇ ಹುಡುಕಿಕೊಳ್ಳುತ್ತೇನೆ!.
- ಅಪ್ಪ: ಆದರೆ, ಆ ಹುಡುಗಿ ಬಿಲ್ ಗೇಟ್ಸ್‌ನ ಪುತ್ರಿ.
- ಮಗ: ಹೌದಾ... ವಿಷಯ ಹೀಗಿದ್ದರೆ ಓ...ಕೆ.
ನಂತರ ಅಪ್ಪ ಬಿಲ್‌ಗೇಟ್ಸ್ ಅವರಲ್ಲಿ ಪ್ರಸ್ತಾಪ ಇಡುತ್ತಾನೆ.
- ಅಪ್ಪ: ನಿಮ್ಮ ಮಗಳಿಗೆ ನನ್ನ ಬಳಿ ಗಂಡನಿದ್ದಾನೆ.
- ಬಿಲ್‌ಗೇಟ್ಸ್: ಆದರೆ, ನನ್ನ ಮಗಳಿಗಿನ್ನೂ ಮದುವೆಯ ವಯಸ್ಸಾಗಿಲ್ಲ!
- ಅಪ್ಪ: ಆದರೆ, ಈ ಯುವಕ ವಿಶ್ವಬ್ಯಾಂಕ್‌ನ ಉಪಾಧ್ಯಕ್ಷ.
- ಬಿಲ್‌ಗೇಟ್ಸ್: ಆಹಾ.. ವಿಷಯ ಹೀಗಿದ್ದರೆ ಓ...ಕೆ.
ಅಂತಿಮವಾಗಿ ಅಪ್ಪ ವಿಶ್ವಬ್ಯಾಂಕ್‌ನ ಅಧ್ಯಕ್ಷನನ್ನು ಕಾಣಲು ಹೋಗುತ್ತಾನೆ.
- ಅಪ್ಪ: ವಿಶ್ವಬ್ಯಾಂಕ್ ಉಪಾಧ್ಯಕ್ಷರಾಗಿ ಶಿಫಾರಸು ಮಾಡಲು ನನ್ನ ಬಳಿ ಒಬ್ಬ ಯುವಕನಿದ್ದಾನೆ.
- ಅಧ್ಯಕ್ಷ: ಆದರೆ, ನಮ್ಮಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಉಪಾಧ್ಯಕ್ಷರಿದ್ದಾರೆ.
- ಅಪ್ಪ: ಆದರೆ, ಈ ಯುವಕ ಬಿಲ್ಗೆತ್ಸ್ ಅಳಿಯ.
- ಅಧ್ಯಕ್ಷ: ಹೌದಾ... ವಿಷಯ ಹೀಗಿದ್ದರೆ ಓ..ಕೆ.!
ನೋಡಿ ಸ್ವಾಮಿ ವ್ಯವಹಾರ ಮಾಡುವುದು ಎಂದರೆ ಹೀಗೆ!.
ನೀತಿ: ನಿಮ್ಮಲ್ಲಿ ಏನೂ ಇಲ್ಲದಿದ್ದರೂ, ಏನಾದರೂ ನೀವು ಪಡೆದುಕೊಳ್ಳಬಹುದು. ಆದರೆ, ಪಾಸಿಟಿವ್ ಆಗಿರಬೇಕು.
-----------------------------
ಮಾರ್ಕೆಟಿಂಗ್ ಎಂದರೇನು?
ನೀವು ಪಾರ್ಟಿಯಲ್ಲಿ ಸುಂದರವಾದ ಯುವತಿಯನ್ನು ನೋಡುತ್ತೀರಿ ಎಂದುಕೊಳ್ಳಿ. ಆಕೆಯ ಬಳಿಗ ಹೋಗಿ ಕೇಳಿ, ನಾನು ತುಂಬಾ ಶ್ರೀಮಂತ. ನನ್ನನ್ನು ಮದುವೆಯಾಗ್ತೀಯಾ!? - ಅದು ಮರ್ಕೆಟಂಗ್.

ಅಂತೆಯೇ ನೀವು ಸ್ನೇಹಿತರೊಂದಿಗೆ ಇದ್ದಾಗ ಸುಂದರವಾದ ಹುಡುಗಿಯನ್ನು ಕಂಡರೆ, ನಿಮ್ಮಲ್ಲಿದ್ದ ಒಬ್ಬ ಸ್ನೇಹಿತ ಆಕೆಯ ಬಳಿ ಹೋಗಿ, ನನ್ನ ಸ್ನೇಹಿತ ತುಂಬಾ ಧನಿಕ. ಆತನನ್ನು ಮದುವಯಾಗುವಿರಾ ಎಂದು ಕೇಳಿದರೆ- ಅದು ಜಾಹಿರಾತು.

ಪಾರ್ಟಿಯಲ್ಲಿ ಕಂಡ ಯುವತಿಯಿಂದ ಫನ್ ನಂಬರ್ ಪಡದು, ದಿನ ಕಳೆದ ನಂತರ ಫೋನ್‌ನಲ್ಲಿ ಮಾತನಾಡಿ, ಮದುವೆಯಾಗುವೆಯಾ ಎಂದು ಕೇಳಿದರೆ ಅದು- ಟೆಲಿ ಮಾರ್ಕೆಟಿಂಗ್.


ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯ ಬಳಿ ಹೋಗಿ, ಪಾನೀಯ ಕುಡಿಸಿ, ಆಕೆ ಕೆಳಗೆ ಬೀಳಿಸಿದ ಬ್ಯಾಗ್ ಅನ್ನು ಎತ್ತಿಕಟ್ಟು ಕಾರ್‌ನಲ್ಲಿ ಕೂರಿಸಿಕಂಡು ಮನೆಗೆ ಕರೆದುಕೊಂಡು ಹೋಗುವಾಗ, ಮದುವೆಯಾಗವೆಯಾ ಎಂದು ಕೇಳಿದರೆ
- ಅದು ಸಾರ್ವಜನಿಕ ಸಂಪರ್ಕ.

ನೀವು ಪಾರ್ಟಿಯಲ್ಲಿ ಕಂಡ ಸುಂದರ ಯುವತಿ, ತಾನಾಗಿಯೇ ನಿಮ್ಮ ಬಳಿಗೆ ಬಂದು ನೀವು ತುಂಬಾ ಧನಿಕರಿದ್ದೀರಿ. ನಾನು ನಿಮ್ಮನ್ನು ಮದುವೆಯಾಗಲು ಇಚ್ಚಿಸುತ್ತೇನೆ ಎಂದು ಕೇಳಿದರೆ- ಅದು ಬ್ರಾಂಡ್ ರೆಕಗ್ನಿಷನ್.

ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯನ್ನು ಮದುವಯಾಗುವೆಯ ಎಂದು ನೀವು ನೇರ ನೇರ ಕೇಳುತ್ತೀರಿ. ಆಗ ಆಕೆ ನಿಮ್ಮ ಕೆನ್ನೆಗೆ ನಯವಾಗಿ ಏಟು ಕೊಟ್ಟರೆ- ಅದು ಗ್ರಾಹಕರ ಫೀಡ್‌ಬ್ಯಾಕ್!.

Sunday, December 14, 2008

ಸುಂಕ ಗೀತೆ !

ಮೊನ್ನೆ ಮೇಲ್ ಚೆಕ್ ಮಾಡಿದ ಸಂದರ್ಭದಲ್ಲಿ ಒಂದು ಆಶ್ಚರ್ಯ ಕಾದಿತ್ತು. ಅದಕ್ಕೆ ಕಾರಣವಾದವರು ಸ್ನೇಹಿತ, ಬೆಂಗಳೂರಿನಲ್ಲಿ ಕಂಪ್ಯೂಟರ್‌ನೊಂದಿಗೆ ತೆಂಕಣ- ಬಡಗಣ ನೋಡುತ್ತಿರುವ ಟಿ.ವೈ. ಪ್ರಸಾದ್. ಅವರು ಕಳುಹಿಸಿದ್ದ ಟ್ಯಾಕ್ಸ್ ಪೊಯಮ್ ನನ್ನನ್ನು ಸಾಕಷ್ಟು ಚಿಂತನೆಗೆ ಹಚ್ಚಿತು. ಆ ಇಂಗ್ಲಿಷ್ ಪೊಯಂ ಅನ್ನು ನಾನು ಇಲ್ಲಿ ಸುಂಕ ಗೀತೆಯಾಗಿ ಇಲ್ಲಿ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಓದಿ ನೋಡಿ, ನಾವು ಎಷ್ಟೊಂದು ಸುಂಕದೊಳಗೆ ಜೀವನ ನಡೆಸುತ್ತಿದ್ದೇವೆ ಎಂಬುದರ ಮೇಲೆ ಈ ಗೀತೆ ಬೆಳಕು ಚೆಲ್ಲುತ್ತದೆ... ನಿಮಗೆ ಇದು ಹಾಸ್ಯ ಎಂಬ ಆಶ್ಚರ್ಯವೂ ಉಂಟಾಗಬಹುದು...

ಅವನ ನೆಲಕ್ಕೂ ತೆರಿಗೆ
ಅವನ ಹಾಸಿಗೆಗೂ ತರಿಗೆ
ಆತ ತಿನ್ನುತ್ತಿರುವ ಟೇಬಲ್‌ಗೂ ತೆರಿಗೆ

ಅವನ ಟ್ರಾಕ್ಟರ್‌ಗೂ ತೆರಿಗೆ
ಅವನ ಹೇಸರಗತ್ತೆಗೂ ತೆರಿಗೆ
ಅವನಿಗೆ ಕಲಿಸಲು, ನಿಯಮಗಳನ್ನು ಹೇಳಲು ತೆರಿಗೆ

ಅವನ ಕೆಲಸಕ್ಕೂ ತೆರಿಗೆ
ಅವನ ಸಂಬಳಕ್ಕೂ ತೆರಿಗೆ
ಅಂತೂ ಇಂತೂ ಅವನು ಕೆಲಸ ಮಾಡಿದರೆ
ಅಂತಿಮವಾಗಿ ಸಿಗುವುದು ಶೇಂಗಾವಷ್ಟೆ!

ಅವನ ದನಕ್ಕೂ ತೆರಿಗೆ
ಅವನ ಕುರಿಗೂ ತೆರಿಗೆ
ಅವನ ಪ್ಯಾಂಟ್‌ಗೂ ತೆರಿಗೆ
ಅವನ ಟೈಗೂ ತೆರಿಗೆ
ಅವನ ಶರ್ಟಿಗೂ ತೆರಿಗೆ
ಅವನ ಕಸಕ್ಕೂ ತೆರಿಗೆ

ಅವನ ತಂಬಾಕಿಗೂ ತೆರಿಗೆ
ಅವನ ಕುಡಿತಕ್ಕೂ ತೆರಿಗೆ
ಅವನು ಚಿಂತಿಸಲು ಪ್ರಯತ್ನಿಸಿದರೂ ತೆರಿಗೆ!

ಅವನ ಸಿಗರೇಟಿಗೂ ತೆರಿಗೆ
ಅವನ ಬಿಯರ್‌ಗೂ ತೆರಿಗೆ
ಅವನು ಅತ್ತನೆಂದರೆ ಅನ ಕಣ್ಣೀರಿಗೂ ತೆರಿಗೆ

ಅವನ ಕಾರಿಗೂ ತೆರಿಗೆ
ಅವನ ಅನಿಲಕ್ಕೂ ತೆರಿಗೆ
ಇತರೆ ಮಾರ್ಗ ಹುಡುಕ ಹೋದರೆ ಅವನ ಪುಷ್ಠಕ್ಕೂ ತೆರಿಗೆ
ಏನೇನು ತೆರಿಗೆ ಇದೆ ಎಂದು ತಿಳಿದುಕೊಳ್ಳಲು
ಹದರೆ ಅವನಿಗೆ ಅದಕ್ಕೂ ತರಿಗೆ!

ಅಂತಿಮವಾಗಿ ಅವನ ಶವಸಂಸ್ಕಾರಕ್ಕೂ ತೆರಿಗೆ
ಅದನ್ನ ಮಾಡಿದ ನೆಲಕ್ಕೂ ತೆರಿಗೆ
ಆತನ ಸಮಾದಿಯ ಮೇಲೆ ಹೀಗೆ ಬರೆಯಬೇಕು-
ನನ್ನನ್ನು ಕೊನೆವರೆಗೂ ತೆರಿಗೆ ಸವಾರಿ ಮಾಡಿತು...

ಆತನ ಪ್ರಾಣ ಹೋಯಿತಂದರೆ
ಆಗಲೂ ವಿಶ್ರಾಂತಿ ಇಲ್ಲ,
ಅದು ಆತ ಹೊಂದಿದ್ದ ಪಿತ್ರಾರ್ಜಿತ
ಆಸ್ತಿ ಮೇಲೆ ತೆರಿಗೆ ಹಾಕಲು ಸುಸಂದರ್ಭ!

ಅಕೌಂಟ್ಸ್ ರಿಸಿವೇಬಲ್ ಟ್ಯಾಕ್ಸ್
ಏರ್‌ಲೈನ್ ಸರ್ಚಾಜ್ ಟ್ಯಾಕ್ಸ್
ಏರ್‌ಲೈನ್ ಫ್ಯೂಯೆಲ್ ಟ್ಯಾಕ್ಸ್
ಏರ್‌ಪೋರ್ಟ್ ನಿರ್ವಹಣಾ ತೆರಿಗೆ
ಕಟ್ಟಡ ಅನುಮತಿ ತೆರಿಗ
ಸಿಗರೇಟ್ ತೆರಿಗೆ
ಕಾರ್ಪೋರೇಟ್ ಆದಾಯ ತೆರಿಗೆ
ಮರಣ ತೆರಿಗೆ
ನಾಯಿ ಹೊಂದಲು ಪರವಾನಗಿ ತೆರಿಗೆ
ವಾಹನ ಅನುಮತಿ ತೆರಿಗೆ
ಎಕ್ಸೈಸ್ ತೆರಿಗೆ
ಫೆಡರಲ್ ಆದಾಯ ತರಿಗೆ
ಫೆಡರಲ್ ಅನ್‌ಎಂಪ್ಲಾಯಮೆಂಟ್ (ಯುಐ)
ಫಿಶಿಂಗ್ ಪರವಾನಗಿ ತೆರಿಗೆ
ಆಹಾರ ಪರವಾನಗಿ ತೆರಿಗೆ
ಪೆಟ್ರಲ್ ತೆರಿಗೆ
ಗ್ರಾಸ್ ರಿಸಿಪ್ಟ್ಸ್ ತೆರಿಗೆ
ಆರೋಗ್ಯ ತೆರಿಗೆ
ಬೇಟೆಯಾಡಲು ಪರವಾನಗಿಗೆ ತೆರಿಗೆ
ಹೈಡ್ರೋ ತೆರಿಗೆ
ಪಿತ್ರಾರ್ಜಿತ ಆಸ್ತಿಗೆ ತೆರಿಗೆ
ಬಡ್ಡಿ ತೆರಿಗೆ
ಮದ್ಯ ತೆರಿಗೆ
ಐಷಾರಾಮಿ ತೆರಿಗೆ
ವಿವಾಹ ಅನುಮತಿ ತರಿಗೆ
ವೈದ್ಯಕೀಯ ಸೌಲಭ್ಯಕ್ಕೆ ತೆರಿಗೆ
ಮಾರ್ಟೇಜ್ ತೆರಿಗೆ
ವೈಯಕ್ತಿಕ ಆದಾಯ ತರಿಗೆ
ಆಸ್ತಿ ತೆರಿಗೆ
ಬಡತನ ತೆರಿಗೆ
ಔಷಧಿಗಳಿಗೆ ತೆರಿಗೆ
ಪ್ರಾವಿನಿಷಿಯಲ್ ಆದಾಯ ತರಿಗೆ
ರಿಯಲ್ ಎಸ್ಟೇಟ್ ತೆರಿಗ
ರೀಕ್ರಿಯೇಷನಲ್ ವಾಹನ ತೆರಿಗೆ
ರೀಟೇಲ್ ಸೇಲ್ಸ್ ತೆರಿಗೆ
ಸರ್ವಿಸ್ ಚಾರ್ಜ್ ತೆರಿಗೆ
ಶಾಲಾ ತೆರಿಗೆ
ದೂರವಾಣಿ ತೆರಿಗೆ
ದೂರವಾಣಿ, ಪ್ರಾವಿನ್ಸಿಯಲ್ ಮತ್ತು ಸರ್‌ಚಾರ್ಜ್ ತೆರಿಗೆ
ದೂರವಾಣಿ ಕನಿಷ್ಟ ಬಳಕೆಗೆ ಸರ್ಚಾರ್ಜ್ ತೆರಿಗೆ
ವಾಹನ ಪರವಾನಗಿ ನೋಂದಣಿ ತೆರಿಗೆ
ನೀರಿನ ಕಂದಾಯ
ವಾಟರ್‌ಕ್ರಾಫ್ಟ್ ನೋಂದಣಿ ತೆರಿಗೆ
ವಾಹನ ಮಾರಾಟ ತೆರಿಗೆ
ಬಾವಿ ತೆಗೆಯಲು ಅನುಮತಿ ತೆರಿಗೆ
ಕಾರ್ಮಿಕರ ಪರಿಹಾರ ತೆರಿಗೆ
ನೀವು ಇನ್ನೂ ಇದು ಹಾಸ್ಯ ಎಂದು ಯೋಚಿಸುತ್ತಿದ್ದೀರಾ?

ನಿಮಗೂ ಗೊತ್ತು ನಮ್ಮ ದೇಶದಲ್ಲಿ ೧೦೦ ವರ್ಷಗಳ ಹಿಂದೆ ಯಾವುದೇ ಸುಂಕ/ ತೆರಿಗೆ ಇರಲಿಲ್ಲ. ಒಂದರ್ಥದಲ್ಲಿ ನಾವು ಅಭಿವೃದ್ಧಿ ಹೊಂದುತ್ತಿರುವ ದೇಶದವರಾಗಿದ್ದೆವು. ದೇಶದ ಮೇಲೆ ಯಾವುದೇ ಸಾಲವೂ ಇರಲಿಲ್ಲ. ಸಾಕಷ್ಟು ಮಧ್ಯಮವರ್ಗದವರೇ ವಾಸಿಸುತ್ತಿರುವ ನಮ್ಮಲ್ಲಿ ಆಗ; ತಾಯಂದಿರು ಮನೆಯಲ್ಲಿಯೇ ಇದ್ದುಕೊಂಡು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳಿಗಾಗಿ ಮನೆಯಲ್ಲಿಯೇ ಇರುತ್ತಿದ್ದರು!

ಆದರೆ ಈಗ ಏನಾಗಿದೆ?
ಎಲ್ಲರೂ ಜೋರಾಗಿ ಹೇಳಿ, ಇದಕ್ಕೆ ಕಾರಣರು ಯಾರು?
ಉತ್ತರ- ರಾಜಕಾರಣಿಗಳು?!

Thursday, December 4, 2008

ಅಯ್ಯಪ್ಪಸ್ವಾಮಿ ಎಂದರೆ ಆಕೆ ನೆನಪಾಗುತ್ತಾರೆ...!


ಮತ್ತೊಂದು `ಅಯ್ಯಪ್ಪನ ಋತು' ಬಂದಿದೆ. ಈ ಸಂದರ್ಭದಲ್ಲಿ ನಮ್ಮೂರಿನಲ್ಲಿ ನಡೆದ ದುರಂತ ಕಥೆ ನೆನಪಾಗುತ್ತದೆ; ಕಾಡುತ್ತದೆ. ಆಗ ಆಕೆ ನೆನಪಾಗುತ್ತಾರೆ!
ಏನಾಗಿತ್ತು ಎಂದರೆ - ಅದೊಂದು ಪುಟ್ಟ ಕುಂಟುಂಬ. ಯಜಮಾನ ಜಯಣ್ಣ ನಾಲೆಯಲ್ಲಿ ನೀರು ಬಿಡುವ ಕೆಲಸ ಮಾಡುವವನು- ಸರ್ಕಾರಿ ಕೆಲಸ. ಪತ್ನಿ ಗೃಹಿಣಿ. ಒಂದು ಗಂಡು- ಒಂದು ಹೆಣ್ಣು. ಶಾಲೆಗ ಹೋಗುತ್ತಿದ್ದವು.
ಈಚೆಗೆ ಸುಮಾರು ೯-೧೦ ವರ್ಷಗಳ ಹಿಂದಿನ ಕಥೆ ಅದು. ಅವರ ಮನೆಯಲ್ಲಿ ಸಂಭ್ರಮವಿತ್ತು; ಭಕ್ತಿಯೂ ಇತ್ತು. ಮನೆಯವರು ಶಬರಿಮಲೆಗೆ ಹೋಗುತ್ತಿದ್ದಾರೆ. ಹಲವಾರು ದಿನಗಳಿಂದ ಮನೆಯ ಸಹವಾಸಕ್ಕೆ ಬಂದೇ ಇಲ್ಲ. ಭಕ್ತಿಯಲ್ಲಿ ಮಿಂದುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ. ಭಜನೆ ಮಾಡುತ್ತಾರೆ.
ದೇವರು ಕೊನೆಗೂ ಭಕ್ತಿ ಭಾವನೆ ಬೆಳೆಸಿದ್ದಾನೆ ಎಂದು ಆಕೆ ಖುಷಿ ಪಟ್ಟಿದ್ದರು. ಊರಿನಲ್ಲಿ ಯಾರ ಸಹವಾಸಕ್ಕೂ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದ ಅವರು, ಮಾಲೆ ಧರಿಸಿದ್ದ ಸಂದರ್ಭದಲ್ಲಿ ಮತ್ತಷ್ಟು ಮೌನಿಯಾಗಿದ್ದರು.
ಅಂತೂ ಒಂದು ವಾರ ಕಳೆದಿತ್ತು. ಇರುಮುಡಿಯನ್ನು ಕಟ್ಟಲು ಭರ್ಜರಿಯಾಗಿ ಕಾರ್ಯಕ್ರಮವೂ ನಡೆಯಿತು. ಸಂಬಂಧಿಕರು, ಮನೆಮಂದಿ ಎಲ್ಲಾ ಶುಭ ಹಾರೈಸಿ ಅವರನ್ನು ಶಬರಿಮಲೆ ಬಸ್ಸು ಹತ್ತಿಸಿದ್ದರು. ಇತ್ತ ಮಕ್ಕಳು, ನಮ್ಮಪ್ಪ ಶಬರಿಮಲೆಗೆ ಹೋಗಿದ್ದಾರೆ. ಒಂದಷ್ಟು ಆಟಿಕೆಗಳು, ಬಟ್ಟೆ ಬರೆ, ತಿನಿಸುಗಳನ್ನು ತರಬಹುದು ಎಂಬ ಕಾತರದಲ್ಲಿ ದಾರಿ ಕಾಯುತ್ತಿದ್ದರು. ಅಬ್ಬಬ್ಬಾ ಎಂದರೆ ಒಂದು ವಾರ ಕಾಲ ಪ್ರವಾಸವಿರುತ್ತದೆ. ನಂತರ ಬರುತ್ತೇನೆ ಎಂದು ಹೇಳಿ ಹೋಗಿದ್ದರು ಆತ.
ವಾರವಾಯಿತು. ಹತ್ತು ದಿನವಾಯ್ತು. ಅರ್ಧ ತಿಂಗಳಾಯ್ತು. ತಿಂಗಳೂ ತುಂಬಿತು. ಜಯಣ್ಣನ ಸುಳಿವಿಲ್ಲ. ಸಂಪರ್ಕಕ್ಕೆ ದೂರವಾಣಿ ಇಲ್ಲ. ಮೊಬೈಲ್ ಅಂತೂ ದೂರದ ಮಾತು. ಅವರ ಪತ್ನಿಗೆ ಗಾಬರಿಯಾಯಿತು. ಗಂಡ ಏನಾದರೋ ಏನೋ? ಶಬರಿ ಮಲೆಗೆ ಹೋಗಿ ಬರುವುದಾಗಿ ಹೇಳಿದವರು ತಿಂಗಳಾದರೂ ಬಂದಿಲ್ಲ; ಅವರ ಸಂಕಟ ಆರಂಭವಾಗಿದ್ದೇ ಅಂದಿನಿಂದ. ಹುಡುಕಿದರು. ಹುಡುಕಿಸಿದರು. ಪೊಲೀಸರಿಗೆ ದೂರು ನೀಡಿದರು. ಸಂಬಂಧಿಕರಂದಿಗೆ ಶಬರಿಮಲೆಗೂ ಹೋಗಿ ಬಂದದ್ದಾಯಿತು. ಅಷ್ಟೊಂದು ಭಕ್ತರಿರುವ
ಶಬರಿಮಲಯಲ್ಲಿ ಜಯಣ್ಣರೊಬ್ಬರನ್ನು ಹುಡುಕುವುದು ಸುಲಭವೇನಲ್ಲ. ಎಷ್ಟು ದಿನವೆಂದು ಅಳುತ್ತಾ ಕೂರಲಾಗುವುದು? ಅಳುವುದಕ್ಕೆ ಕಣ್ಣೀರು ಸಹ ಇರಲಿಲ್ಲ; ದಿನ ಅಳುವವರಿಗೆ ಕಣ್ಣೀರು ಉತ್ಪತ್ತಿ ಮಾಡುವವರ್‍ಯಾರು?
ದಿನ ಕಳೆದವು. ಮೂರು ತಿಂಗಳಾಯಿತು, ವರ್ಷವಾಯಿತು. ಊರಿನವರೆಲ್ಲಾ ಅವರ ಸ್ಥಿತಿ ಕಂಡು ಮರುಗಿದರು. ಮುಖಂಡರು ಸಂಗತಿಯನ್ನು ನೀರಾವರಿ ಇಲಾಖೆಯ ಗಮನಕ್ಕೆ ತಂದರು. ಕಾಡಿಬೇಡಿದ್ದರಿಂದಾಗಿ, ಪತಿಯ ಕೆಲಸ ಪತ್ನಿಗೆ ಸಿಕ್ಕಿತು. ಗಂಡ ಬದುಕಿದ್ದಾನೋ, ಸತ್ತಿದ್ದಾನೋ ಏನೋ ಎಂಬ ಗೊಂದಲದಲ್ಲಿ ಇರುವ ಆಕೆ ಯಾವಾಗಲೂ ಮುಡಿ ತುಂಬ ಹೂವು ಮುಡಿಯುತ್ತಾರೆ. ಆಕೆಗೆ ನೀರಾವರಿ ಇಲಾಖೆಯು ಮೈಸೂರು ಕಚೇರಿಯಲ್ಲಿ ಸಹಾಯಕಿಯ ಕೆಲಸ ನೀಡಿದೆ.
ಈ ಎಲ್ಲದರ ನಡುವೆ ಮಕ್ಕಳು ಅಪ್ಪ ಏನಾದನೋ ಎಂಬ ಚಿಂತಯಲ್ಲಿಯೇ ಬೆಳೆದು ದೊಡ್ಡವರಾಗಿದ್ದಾರೆ. ಒಂದಷ್ಟು ಓದಿಕಂಡು, ತಾಯಿಯೊಂದಿಗೆ ಕುಟುಂಬ ನಿರ್ವಹಣೆಗೆ ಕೈಜೋಡಿಸಲು ಕೈಲಾದ ಕೆಲಸ ಮಾಡುತ್ತಿದ್ದಾರೆ. ಆಕೆ, ಸಹಾಯಕಿ ಕೆಲಸ ಮಾಡಿಕಂಡೇ ಜೀವನ ಸಾಗಿಸುತ್ತಿದ್ದಾರೆ. ಬೆಳೆದು ನಿಂತ ಮಗಳ ಮದುವೆ ಮಾಡಿ ಮುಗಿಸಿದ್ದಾರೆ. ಮಗ ಇದ್ದಾನೆ. ಮುರುಗೇಶ. ಸಹಜವಾಗಿಯೇ ಆತ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಇದ್ದಾನೆ. ಆಗಾಗ ಬಂದು ತಾಯಿಯನ್ನು ನೋಡಿ ಹೋಗುತ್ತಾನೆ. ಆಕೆಯ ಅಕ್ಕನಿಗೂ ಒಂದು ಮಗುವಾಗಿದೆ.
ಮಗ-ಮಗಳು ಬೆಳೆದು ದೊಡ್ಡವರಾಗಿದ್ದಾರೆ. ಮಗಳಿಗೆ ಮದುವೆಯೂ ಆಗಿದೆ. ಮೊಮ್ಮಗು ಸಹ ಇದೆ. ಆದರ, ಜಯಣ್ಣನ ಸುಳಿವಿಲ್ಲ! ಆಕೆ, ಕೆಲಸ ಮಾಡುತ್ತಿದ್ದಾರೆ- ಪತಿಯ ನೆನಪಿನಲ್ಲಿ- ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂಬ ಭಾವನೆಯಲ್ಲಿ! ಜಯಣ್ಣ ಏನಾದನೋ? ಎಲ್ಲಿ ಹೋದನೋ ಇನ್ನೂ ಗೊತ್ತಿಲ್ಲ. ಆದರೆ, ಅವರ ಕುಟುಂಬ ಮಾತ್ರ ಅವರು ಬರುತ್ತಾರೆ ಎಂದು ನಂಬಿದೆ. ಊರಿನವರು ಮಾತ್ರ ಆತನ ಕಥೆ ಮುಗಿದು ಹೋಗಿದೆ ಎಂದುಕೊಂಡಿದ್ದಾರೆ.
ಇಂತಹ ಕಥೆ ಕೇಳಿದರೆ, ಮನಸ್ಸು ಒದ್ದೆಯಾಗದೆ ಇರಲಿಕ್ಕಿಲ್ಲ. ಡಿಸೆಂಬರ್- ಜನವರಿ ಬಂತೆಂದರೆ ಈ ಘಟನೆ ಮನಸ್ಸು ತಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ- ನಿನ್ನ ನೋಡಲು ಬಂದ ಭಕ್ತರಿಗೆ ಈ ಶಿಕ್ಷ ನೀಡುವುದೇ ಎಂಬ ಪ್ರಶ್ನೆ ಬರುತ್ತದೆ. ಅಯ್ಯಪ್ಪ ಉತ್ತರಿಸುತ್ತಾನಾ?! (ನಮ್ಮ ಹರೀಶಣ್ಣ ಅಯ್ಯಪ್ಪಸ್ವಾಮಿ ಕಾಣಲು ಶಬರಿಮಲೆಗೆ ಹೋಗಿದ್ದಾರೆ. ಸುಖವಾಗಿ ಇದ್ದು ಬರಲಿ ಎಂಬ ಆಶಯದಲ್ಲಿ ಬರೆದದ್ದು...)

Tuesday, December 2, 2008

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ..!


ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತು ನಮ್ಮ ವ್ಯವಸ್ಥೆಗೆ
ಅನ್ವಯವಾಗುತ್ತದೆ. ಏಕೆಂದರೆ, ನಮ್ಮ ಸರ್ಕಾರಗಳು ಎಚ್ಚರಗೊಳ್ಳವುದು ಎಲ್ಲವೂ ಮುಗಿದ ಮೇಲಷ್ಟೆ.
ಅನಾಹುತಗಳು ಆದ ನಂತರ ಬಂದು ಸ್ಥಳ ಪರಿಶೀಲನೆ ಮಾಡುವ ಪೊಲೀಸರು, ಅದನ್ನು ಮುಂಚೆಯೇ
ತಡೆಯುವಲ್ಲಿ ವಿಫಲರಾಗುತ್ತಾರೆ. ಅಷ್ಟಕ್ಕೂ, ಅಷ್ಟು ವ್ಯವಸ್ಥೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಇಲ್ಲ ಎಂಬ
ಸತ್ಯವನ್ನು ನಾವು ನಂಬಲೇಬೇಕು. ಇದು ಮುಂಬೈನಲ್ಲಿ ನಡೆದ ಉಗ್ರರ ಅಟ್ಟಹಾಸದಿಂದಾಗ ಅನಾಹುತಕ್ಕೂ
ಅನ್ವಯವಾಗುವುದಿಲ್ಲವೇ?

ಆದರೆ.... ಅನಾಹುತದಿಂದ ಆಗುವ ಪ್ರಾಣಹಾನಿ, ಆಸ್ತಿಹಾನಿಗಳನ್ನು ತುಂಬಿಕೊಡುವವರು ಯಾರು?
ಘಟನೆ ನಡೆಯಿತು ಎಂಬ ಕಾರಣಕ್ಕೆ ಗೃಹಮಂತ್ರಿಯೊಬ್ಬರು ರಾಜೀನಾಮೆ ನೀಡುವುದರಿಂದ, ಈಗಾಗಲೇ
ನಷ್ಟ ತುಂಬಲಾದೀತೆ?! ಹಾಗೆ ನೋಡಿದರೆ, ಹುತಾತ್ಮ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರು ಹೇಳಿರುವ ಹೇಳಿಕೆ ತಾಕತ್ತಿನದು. ಇದೇ ವಿಷಯವನ್ನು ಇಟ್ಟುಕೊಂಡು ರಾಜಕರಣಿಗಳು ಮೈಲೇಜ್ ತೆಗೆದುಕೊಳ್ಳಬಾರದು ಎಂಬ ಸಮರ್ಪಕವಾದ ಹೇಳಿಕೆಯನ್ನು ಅವರು ನೀಡಿದ್ದಾರೆ. ಅವರಲ್ಲಿ ಪುತ್ರನನ್ನು ಕಳೆದುಕೊಂಡ ನೋವಿದೆ. ನೋವಿನಲ್ಲಿ ಆಡುವ ಮಾತುಗಳ ತೀವ್ರತೆ ಹೆಚ್ಚು; ಪರಿಣಾಮ ಚೂರಿ ಇರಿದಂತೆಯೇ ಇರುತ್ತದೆ. ಅದು ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲವೇಕೆ? ಇದನ್ನು ತಿಳಿಯದೆ, ಸಂದೀಪ್ ಮೇಜರ್ ಅಲ್ಲದಿದ್ದರೆ ಅವರ ಮನೆಗೆ ನಾಯಿಯೂ ಹೋಗುತ್ತಿರಲಿಲ್ಲ ಎಂಬ ಬೇಜವಾಬ್ದಾರಿಯ ಹೇಳಿಕೆ ನೀಡಿರುವ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದಗೆ ಏನೆನ್ನಬೇಕು? ಧಿಕ್ಕಾರ ಹಾಕುವುದು ಬಿಟ್ಟರೆ ಬೇರೆ ಮಾತುಗಳನ್ನು ಆಡಬೇಕಿಲ್ಲ.

ನಾವು ಶೂರರು..
ಊರೆಲ್ಲಾ ಕೊಳ್ಳೆಯಾದ ಮೇಲೆ ನಾವು ಶೂರರು ಎಂದು ಎಲ್ಲರೂ ಕೊಚ್ಚಿಕೊಳ್ಳುತ್ತಿದ್ದಾರೆ. ನಾವು ಇಷ್ಟು ಪಡೆ ಹೊಂದಿದ್ದೇವೆ. ಇಷ್ಟ ಆಯುಧಗಳಿವೆ ಎಂದು ಪ್ರದರ್ಶಿಸುತ್ತಿದ್ದಾರೆ. ಇದರ ಬದಲಿಗೆ ನಮ್ಮ ಒಳಗಡೆಯೇ ಇರುವ ಉಗ್ರರನ್ನು ಪತ್ತೆ ಹಚ್ಚಲು ಏಕೆ ಸಾಧ್ಯವಾಗುತ್ತಿಲ್ಲ? ಈಗಾಗಲೇ ಬಂಧಿತರಾಗಿರುವ ಉಗ್ರರ ವಿಚಾರಣೆಗಳನ್ನು ವಿಳಂಬ ಮಾಡುತ್ತಿರುವುದು ಏಕೆ? ಅವರಿಗೆ ಊಟ- ಉಪಚಾರ ಮಾಡಿಕೊಂಡು ಸುರಕ್ಷಿತವಾದ ಜಾಗದಲ್ಲಿ ಇರಿಸಿ, ವಿಐಪಿಗಳಂತೆ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದು ಸಾಕುತ್ತಿರುವುದಾದರೂ ಏಕೆ ಎಂಬ ಬಗ್ಗೆ ಚರ್ಚೆಯಾಗಬೇಕಿದೆ. ಇದೇ ಸಂಗತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾತನಾಡುವವರಿಗೆ, ಮಾಡುವವರಿಗೆ ಸಾರ್ವಜನಿಕರು ತಕ್ಕ ಪಾಠ ಕಲಿಸಬೇಕಿದೆ.

ಕಮಾಂಡೋಗಳಿಗೆ ಏನಿದೆ?
ಮುಂಬೈ ಘಟನೆಯಿಂದ ತಲ್ಲಣಗೊಂಡಿದ್ದ ಇಡೀ ದೇಶ ಸಹಜ ಸ್ಥಿತಿಗೆ ಮರಳಲು ಎನ್‌ಎಸ್‌ಜಿ ಕಮಾಂಡೋಗಳು ಕಾರಣರಾಗಿದ್ದಾರೆ. ಅಲ್ಪ ಸೌಲಭ್ಯದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಅವರಿಗೆ ನಮ್ಮದೊಂದು ಸಲ್ಯೂಟ್ ಇರಲಿ. ಅವರನ್ನು ಮತ್ತಷ್ಟು ಬಲಪಡಿಸುವ ಕ್ರಮಗಳನ್ನು
ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮುಂಬೈ ಘಟನೆ ಮರುಕಳಿಸದಂತೆ ನೋಡಿಕೊಳ್ಳವ ಹೊಣೆ ಸರ್ಕಾರದ ಮೇಲಿದೆ. ಹೊಣೆ ಯಾವಾಗಲೂ ಇರುತ್ತದೆ. ಆದರೆ, ಅದನ್ನು ಸರ್ಕಾರಗಳು, ಪೊಲೀಸ್ ವ್ಯವಸ್ಥೆ, ಗುಪ್ತಚರ ದಳಗಳು ಎಷ್ಟು ಜವಾಬ್ದಾರಿಯಿಂದ ನಿರ್ವಹಿಸುತ್ತಿವೆ?

Thursday, November 27, 2008

ಸಾವಿಗೆ ಕೊನೆ ಇಲ್ಲ...


ಸಾವು ಇರುವುದೇ ಹಾಗೆ...
ಯಾರನ್ನೂ ನೋಡುವುದಿಲ್ಲ, ಚಿಂತಿಸುವುದಿಲ್ಲ, ಮರುಗುವುದಿಲ್ಲ, ಕೊರಗುವುದಿಲ್ಲ.
ಸಾವು ಯಾರನ್ನೂ ನೋಡುವುದಿಲ್ಲ...
ಗಂಡು ಹಾರಿಸುತ್ತಿರುವ ಉಗ್ರನನ್ನಾದರೂ ಸರಿ; ಜನರನ್ನು ರಕ್ಷಿಸಲು ನಿಂತ ಪೊಲೀಸರನ್ನಾದರೂ ಸರಿ. ದೇಶ ರಕ್ಷಣೆಗೆ ನಿಂತ ಸೈನಿಕರನ್ನಾದರೂ ಸರಿ.
ಸಾವು ಸಮಯ ನೋಡುವುದಿಲ್ಲ...
ಮನೆಯಲ್ಲಿದ್ದರಾದರೂ ಸರಿ, ಹೋಟೆಲ್‌ನಲ್ಲಿದ್ದರಾದರೂ ಸರಿ, ಪ್ರಯಾಣದಲ್ಲಾದರೂ ಸರಿ.
ಸಾವು ಸ್ಥಿತಿ ಗಮನಿಸುವುದಿಲ್ಲ...
ಸಂಭ್ರಮದಲ್ಲಿದ್ದರೂ ಸರಿ, ಸಂಕಷ್ಟದಲ್ಲಿದ್ದರೂ ಸರಿ, ಯಾರನ್ನೋ ಕಾಣುವ ಕಾತರದಲ್ಲಿದ್ದರೂ ಸರಿ, ಏನನ್ನೋ ಪಡೆಯವ; ಗಳಿಸುವ ಛಲವಿದ್ದರೂ ಸರಿ.
ಸಾವು ಯಾರನ್ನೂ ಬಿಡುವುದಿಲ್ಲ...
ಬಡವನಾದರೂ ಸರಿ, ಧನಿಕನನ್ನಾದರೂ ಸರಿ, ಮಾಣಿಯಾದರೂ ಸರಿ, ಮಾಲಿಕನಾದರೂ ಸರಿ.
ಸಾವು ಇರುವುದೇ ಹೀಗೆ.

- ನ. ೨೬ರ ರಾತ್ರಿ ಸಾವಿಗೆ ಕಾರಣ ಹುಡುಕಲು, ಇದನ್ನು ಬರೆಯಲು ಕಾರಣವಾಗಿದ್ದು, ಮುಂಬೈನಲ್ಲಿ ನಡದ ಉಗ್ರರ ಅಟ್ಟಹಾಸ.
ಉಗ್ರರೂ ಒಂದು ರೀತಿಯಲ್ಲಿ ಸಾವಿನಂತೆಯೆ. ಕುರಡು ಉದ್ದೇಶಕ್ಕೆ, ತಮ್ಮದಲ್ಲದ ಆಸೆಗೆ, ಯಾರದೋ ಒತ್ತಡಕ್ಕೆ ಸಿಕ್ಕಿಯೋ ಅಥವಾ ಮತ್ಯ್ತಾವದೋ ಕಾರಣಕ್ಕಾಗಿಯೋ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾರೆ. ಯಾರಿಗೋ ಯಾರದೋ ಮೇಲಿರುವ ಕೋಪ ಅಮಾಯಕರ ಬಾಳಿನಲ್ಲಿ ಬರಸಿಡಿಲಾಗಿ ಬಡಿಯುತ್ತದೆ. ಆ ತಾಜ್‌ನಲ್ಲಿರಲಿ, ನಾರಿಮನ್ ಪ್ರದೇಶದಲ್ಲಿರಲಿ, ಓಬೆರಾಯ್ ಹೋಟೆಲ್‌ನಲ್ಲಾಗಲೀ ಸಾವಿಗೀಡಾದ ನೂರಕ್ಕೂ ಹಚ್ಚು ಜೀವಗಳ ಕನಸುಗಳು ಏನಾಗಿದ್ದವೋ? ಬೆಳಗ್ಗೆಗಾಗಿ ಏನೇನು ಯೋಜನೆಗಳು ಸಿದ್ಧವಾಗಿದ್ದವೋ. ಏನೇನು ಅಂದುಕೊಂಡಿದ್ದರೋ. ಅವರ ಪ್ರಾಣದೊಂದಿಗೆ ನುಚ್ಚು ನೂರಾದವಲ್ಲ ಆ ಕಸಸುಗಳು ಅವುಗಳಿಗೆ ಬೆಲೆ ಕಟ್ಟುವವರು ಯಾರು? ರಾತ್ರಿ ಮಲಗಿ ಮುಂಜಾನೆಯಾಗುವವರೆಗೆ ಅವರನ್ನು ಜವಾರಾಯನ ಬಳಿಗೆ ಕಳುಹಿಸುವ ಕೃತ್ಯ ಎಸಗಿದ ಉಗ್ರ ಎನ್ನುವವರಿಗೆ ಬುದ್ಧಿ ಹೇಳುವವರು ಯಾರು?
ಇಷ್ಟಕ್ಕೂ ಅವರ ಬುದ್ಧಿವಂತಿಕೆ ಎದುರು ನಮ್ಮ ಪೊಲೀಸ್ ವ್ಯವಸ್ಥೆಯ, ಆಡಳಿತದ, ಗಪ್ತಚರ ವಿಭಾಗದವರ ಬದ್ಧಿಗೆ ಏನಾಗಿದೆ? ಎಷ್ಟು ಪ್ರಕರಣಗಳಲ್ಲಿ ಪೊಲೀಸರು ಅನಾಹುತವಾಗುವ ಮುನ್ನ ಎಚ್ಚೆತ್ತುಕೊಂಡಿದ್ದಾರೆ?ಉಗ್ರರ ಬುದ್ಧಿಮತ್ತೆ ಮುಂದೆ ಏಕೆ ಮಂಕಾಗುತ್ತಿದ್ದಾರೆ? ಉಗ್ರರು ಒಮ್ಮೆ ಬಾಂಬ್ ಹಾಕಿದರೆಂದರೆ, ಪೊಲೀಸರ ಗಮನವೆಲ್ಲಾ ಬಾಂಬ್‌ಗಳ ಬಗ್ಗೆಯೇ ಇರುತ್ತದೆ. ಗುಂಡು ಹಾರಿಸಿದರೆಂದರೆ ಬಂದೂಕು ಹಿಡಿದುಕೊಂಡವರು ಪೊಲೀಸರಿಗೆ ಶಂಕಿತ ಉಗ್ರರಂತೆ ತರುತ್ತಾರೆ. ಇವರನ್ನು ಆಟ ಆಡಿಸುವುದು ಉಗ್ರರಿಗೆ ಆಟದಂತೆಯೇ ಆಗಿದೆ ಎನಿಸುತ್ತದೆ. ಯಾರ ನಿರ್ಲಕ್ಷ್ಯವೋ, ಅಜಾಗರೂಕತೆಯೋ, ಯಾವ ಉದ್ದೇಶಕ್ಕಾಗಿ ಭಯೋತ್ಪಾದನೆ, ಉಗ್ರರ ಅಟ್ಟಹಾಸ ನಡೆಯತ್ತದೆಯೋ? ಒಟ್ಟಿನಲ್ಲಿ ಅಮಾಯಕರು ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಭಯೋತ್ಪಾದನೆ ಮತ್ತು ಬಾಂಬ್, ಗುಂಡುಗಳ ಮೂಲಕ ಯುದ್ಧ ಸಾರಿರುವವರಿಗೆ ದಿಕ್ಕಾರವಿರಲಿ. ಸಹನೆ ಪ್ರೀತಿ ಎಂಬ ಮಂತ್ರ ಜಪಿಸಿದ ಗಾಂಧೀಜಿ ಜನಿಸಿದ ದೇಶದಲ್ಲಿ ಈ ರೀತಿ ಹಿಂಸೆ ನಡೆಯತ್ತಿರುವುದನ್ನು ತಾಯಿ ಭಾರತಿ ನೋಡುತ್ತಿದ್ದಾಳೆ . ಆಕೆಗಾಗಿರುವ ನೋವನ್ನು ತುಂಬುವವರು ಯಾರು?
ಉಗ್ರರ ಅಟ್ಟಹಾಸಕ್ಕೆ ಕಾರಣವಾಗಿರುವ ಸಮಾಜದ ಡೊಂಕುಗಳನ್ನು ತಿದ್ದುವವರು ಯಾರು? ಅಹಿಂಸೆಯಿಂದ ನೋವು
ಸಿಗುತ್ತದೆಯೇ ಹೊರತು, ಅದರಿಂದ ಇತರೆ ಲಾಭವಿಲ್ಲ. ಅಹಿಂಸೆ ತತ್ವ ಪಾಲಿಸಿದ ಮಹಾತ್ಮ ಗಾಂಧೀಜಿಯವರೇ ಗೋಡ್ಸೆಯ ಗುಂಡುಗಳಿಗೆ ಪ್ರಾಣ ತೆತ್ತುಬಿಡಬೇಕಾಯಿತು. ಇನ್ನು ಅಹಿಂಸೆ ಮಾರ್ಗ ಹಿಡಿದಿರುವವರು ಇದರಿಂದ ತಪ್ಪಿಸಿಕೊಳ್ಳುವರೇ?!
ಬಹುಷ: ಇದೆಲ್ಲವನ್ನೂ ನಿಲ್ಲಿಸಲು ಇರುವ ಏಕಕ ದಾರಿ ಎಂದರೆ ಎಲ್ಲರೂ ಪರಸ್ಪರ ಪ್ರೀತಿ - ವಿಶ್ವಾಸದಿಂದ ಇರುವುದು. ಇಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರನ್ನು ಸ್ಮರಿಸುತ್ತೇನೆ - ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದಾದರೂ ಹೇಗೆ?
ಲೆಟ್ಸ್ ಲವ್ ಮತ್ತೇ ಮತ್ತೆ...

Saturday, November 22, 2008

ಕನಸಿನ ಮಳೆ!


ನಿನ್ನೆ ರಾತ್ರಿ ನಿದ್ರೆಯ ಆಗಸದಲ್ಲಿ
ಕನಸುಗಳ ಮಳೆ ಆಯ್ತು;
ಪ್ರೀತಿಯ ಬೆಳೆ ಬೆಳೆದಿತ್ತು
ಆಹಾ.. ಎಂತಹ ಲೋಕವದು
ನಿದ್ರೆಗೂ ಎಚ್ಚರವಾಗುತ್ತದೆ!
ಬೆಳಕಿಗೆ ರಾತ್ರಿ ಕಂಡರೆ ಕೋಪವಿರಬೇಕು!
ಓಡಿಸಿಬಿಟ್ಟಿತು; ಕತ್ತಲನ್ನೂ- ನನ್ನ ಕನಸನ್ನೂ..!

ನೆನಪಿನ ಭೂತ...

ಕಳೆದ ಕಾಲದ ಸ್ಮಶಾನದಲ್ಲಿ
ನೆನಪುಗಳ ಭೂತಗಳು
ಕುಣಿಯತ್ತಿವೆ; ಕಾಡುತ್ತಿವೆ..!
ಕಾಲ ಸಾಯುತ್ತದೆ ಏಕೆ?
ನೆನಪುಗಳ ಭೂತ ಸೃಷ್ಟಿಸಲೇ?!

ಹೀಗಾಗುತ್ತಾ...!?


ಬಂದೂಕಿನ ಬಾಯಲ್ಲಿ ಸುವ್ವಾಲಿ;
ಧನಿಕರ ಬಾಯಲ್ಲಿ ಸೇವೆ;
ಕಟುಕರ ಬಾಯಲ್ಲಿ ಪ್ರೀತಿ-ವಿಶ್ವಾಸದ ಮಾತು;
ಶಿಕ್ಷಕರ ಬಾಯಲ್ಲಿ ಪಾಠದೊಂದಿಗೆ ಮಾರ್ಗದರ್ಶನ;
ಲೇಖನಿಯ ಅಂಚಿನಲ್ಲಿ ಪ್ರಾಮಾಣಿಕತೆ;
ಆಳುವವರ ಮನಸ್ಸಿನಲ್ಲಿ ಜನಸೇವಾ ಮನೋಭಾವ
ಇದ್ದರೆ - ಲೋಕ ಸುಂದರ?!
ಹೀಗಾಗುತ್ತಾ..?!

Tuesday, November 18, 2008

ಸ್ನಾನ ಬೇಕಿದೆ!


ಕಣ್ಣೀರು ಕಣ್ಣಿಗೆ ಆಗುವ ಸ್ನಾನ
ಮಳೆ - ಭೂಮಿ ತಾಯಿಗೆ ಪ್ರಕೃತಿ ದೇವತೆ ಮಾಡಿಸುವ ಸ್ನಾನ
ಸ್ನೇಹ ಪ್ರೀತಿ - ಮನಸಿನ ಕೊಳೆ ತೊಳೆಯಲು ಆಗುವ ಭಾವನೆಯ ಸ್ನಾನ
ಇದೊಂದು ಸ್ನಾನವಾದರೆ ಮತ್ತೊಂದು
ಸ್ನಾ(ಸ್ಥಾ)ನದ ಅಗತ್ಯವಿಲ್ಲ!
ಬಾ ವರುಣ ಸ್ನೇಹ - ಪ್ರೀತಿ
ವಿಶ್ವಾಸ - ನಂಬಿಕೆಯ ರೂಪದಲ್ಲಿ
ತೋಯ್ಸಿ ಹೋಗು ನಮ್ಮೆಲ್ಲರನ್ನು -
ಸ್ನಾನ ಮಾಡಿಸು ಇನ್ನಾದರೂ...!

ಮಂಜು ಮುಸುಕಿದೆ


ನನ್ನ ಮನಸಿನ ಮಂಚದ
ಮೇಲೆ ನಿನ್ನದೇ ಮಂಪರು
ಎಷ್ಟೊಂದು ಮಂಜು
ಮುಸುಕುತ್ತೆ ಅಲ್ಲವೇ
ಇಷ್ಟೇ ಇಷ್ಟು ಪುಟ್ಟ
ಹೃದಯದ ಮೇಲೆ!?

ಒಡೆದು ಮರಿಯಾಗುತ್ತಿದ್ದೆ!

ನಾ ಮೊಟ್ಟೆಯಾಗಿದ್ದರೆ ನೀ
ಸೋಕಿದ ಕೂಡಲೇ ಒಡೆದು
ಮರಿಯಾಗುತ್ತಿದ್ದೆ!
ನಕ್ಷತ್ರವಾಗಿದ್ದರೆ ನೀ ಬಂದ
ಕೂಡಲೇ ಆಕಾಶಕ್ಕೆ ರಂಗೋಲಿಯಾಗುತ್ತಿದ್ದೆ!
ಇಳೆಗೆ ವಿಸ್ಮಯ ಎನಿಸುತ್ತಿದೆ!

Sunday, November 16, 2008

ರಸಿಕ ವರುಣ!


ಈ ಮಳೆರಾಯ ಎಂಥಾ
ರಸಿಕ ಅಲ್ಲವೇ?
ಯಾರನ್ನು ಯಾವಾಗ
ಬೇಕಾದರೂ...
ಯಾರೊಂದಿಗೆ ಯಾವಾಗ
ಬೇಕಾದರೂ..
ರೊಮ್ಯಾನ್ಸ್ ಮಾಡುತ್ತಾನೆ..!
ನಾಚಿಕೆ ಬಿಟ್ಟವ...!
ಊರ ಆಚೆಯಾದರೂ ಸರಿ;
ಒಳಗಾದರೂ ಸರಿ !

ನೋಡಲೆಂದಲ್ಲ...


ನಾ ಬರುತ್ತೇನೆ ನಿನ್ನೊಟ್ಟಿಗೆ
ಮಾತನಾಡುತ್ತೇನೆ
ನೋಡುತ್ತೇನೆ ಎಂಬ ಆಸೆಯಿಂದಲ್ಲ;
ಸದಾ ಕಣ್ಣಲ್ಲೆ ಇರುವ ನಿನ್ನನ್ನು
ನೋಡಲು ಬಂದೆ ಎಂದು
ಹೇಗೆ ಹೇಳಲಿ? ಅವಮಾನಿಸಲಿ?
ಕಣ್ಣಲ್ಲಿ ಹೊತ್ತಿಸಿಟ್ಟ ನಂದಾದೀಪ ನೀನು..!

ಉಣ್ಣುವವರು ಯಾರು?

ಜಾಗತಿಕ ತಾಪಮಾನ
ಎಂಬ ಒಲೆಯಲ್ಲಿ
ಪರಿಸರವೆಂಬ ಅಕ್ಕಿ ಬೇಯುತ್ತಿದೆ
ಅದನ್ನು ಉಣ್ಣುವವರು ಯಾರು?
ಬಡಿಸುವವರು ಯಾರು?!

ಬಾ ಮತ್ತೆ ಬಿಡಿಸು!


ಹೃದಯದ ಮೇಲೆ ನೀ ಬಿಡಿಸಿದ
ರಂಗೋಲಿಯನ್ನು ಜೋರು
ಗಾಳಿ ಅಳಿಸಿ ಹಾಕಿತು;
ಬಾ ಮತ್ತೆ ಚುಕ್ಕಿ ಇಡು ಈ
ಹೃದಯದ ನೆಲವು ಹಬ್ಬಕ್ಕಾಗಿ ಕಾದಿದಿ!
ಧೂಳು ಎಬ್ಬಿಸದೆ ಒಗ್ಗೂಡಿಸುವ
ಪ್ರೀತಿ ಎಂಬ ಸಗಣಿ ಹಾಕು ಬಾ...

ನಿನ್ನದೇ ಸಾಲುಗಳು...

ಹುಡುಗಿ, ಕಲ್ಪನೆಯ ಸಾಲುಗಳಲ್ಲಿ
ಕನಸಿನ ಕವಿತೆ ಕಟ್ಟಬೇಡ!
ಪುಸ್ತಕವಲ್ಲ ಈ ಹೃದಯ;
ಲೇಖನಿಯಲ್ಲ ಆ ಭಾವನೆಗಳು!
ಹೃದಯದ ಮೇಲೆ ಬರೆಯಲು ಹೋದರೆ
ಜಾಗ ಎಲ್ಲಿದೆ?
ಕೆಡಿಸಬೇಡ ಅದು ನನ್ನವಳ
ಮುಖದ ಹಾಳೆ - ಅಲ್ಲಿ
ಅವಳವೇ ಸಾವುಗಳು; ಅವಳದೇ ಪದಗಳು!

ಅವನು!

ಆ ಹುಡುಗ ಅವನಾಯಿತು
ಅವನ ಕೆಲಸವಾಯಿತು
ಸುಮ್ಮನಿದ್ದ; ಹೂ ಬಿರಿಯುವಂತೆ
ನಕ್ಕು ಹೋದಳು ಅವಳು
ಅರಳಲಿಲ್ಲ!
ಈಗ, ವೈನಾಯಿತು ಅವನಾಯಿತು!?

Saturday, November 15, 2008

ಎಳೆದು ತರಬೇಕು?!

ಎಳೆದು ತರಬೇಕಿದೆ
ನಿದ್ರೆಯನು ನಮ್ಮ ಬಳಿಗೆ;
ಯಾವ ಚೆಲುವೆಯ
ಕಣ್ಣಿಗೆ ಸೋತು
ಶರಣಾಗಿ ಹೋಗಿದೆಯೋ?!
ಕನಸು ಕಾಣುತ್ತಾ ಮಲಗಿದೆಯೋ?!

ಎಲ್ಲೋ ಮಲಗಿರಬೇಕು

ಗಂಟೆ ೧೨,
ಮನೆ ಕಾಯುವ ನಾಯಿಯೂ
ಗೀಳುವುದು ಬಿಟ್ಟು
ಮಲಗಿ ಬಿಟ್ಟಿದೆ.
ನಿದ್ರೆ ಕಾಡಿಸುತ್ತಿದೆ ಏಕೆ?
ಬಾಗಿಲ ಮರೆಯಲ್ಲಿ ನಿಂತು
ನಕ್ಕು ನರಳಿಸುವ ಹುಡುಗಿಯಂತೆ?!
ನಿದ್ರೆ ಎಲ್ಲೋ ಮಲಗಿರಬೇಕು; ನಿದ್ರೆ ಬಂದು;
ಮದಿರೆಯಲ್ಲಿ ಮಿಂದು?!

ಹುಟ್ಟು-ಸಾವು- ಪ್ರೀತಿ

ಅಲ್ಲಿ ಕನಸುಗಳು ಹುಟ್ಟುತ್ತವೆ;
ಸಾಯುತ್ತವೆ
ಏಕೆಂದರೆ, ಪ್ರೀತಿ ರುದ್ರಭೂಮಿ
ಅಲ್ಲಿ ಸೋತೆವೆಂದರೆ ಇಲ್ಲಿ ಗೆಲ್ಲುವುದಿಲ್ಲ!

ಕಡಿದು ಹಾಕಬೇಕು?

ಹಸಿರು ಮರಗಳನ್ನೆಲ್ಲಾ
ಕಡಿದು ಹಾಕಬೇಕು;
ಏಕೆಂದರೆ, ಈ ಪಾಪಿ ಜನರಿಗೆ
ಉಸಿರು ನೀಡುತ್ತಿವೆಯಲ್ಲ ಅದಕ್ಕೆ!

ಮರಣಾನಂದ?

ಗಾಳಿಗೆ ಎಲೆಗಳು
ಅಲುಗಾಡುತ್ತಿವೆ,
ಆನಂದಿಸುತ್ತಿವೆ,
ಬಿದ್ದು ಸಾಯುವಾಗಲೂ
ಅವುಗಳಿಗೆ ಎಷ್ಟು ಆನಂದ?!

ಬ()ದುಕು !

ಬದುಕು ಬಂದೂಕಿಗೆ
ಸಾಮ್ಯತ ಇದೆ
ಬದುಕೂ ಒಂದು ರೀತಿ
ಬಂದೂಕು!
ಅದರಲ್ಲಿ ಕ್ರೌರ್ಯ
ಎಂಬ ಗುಂಡುಗಳಿವೆ!
ಸಾಂತ್ವನ, ಸಹನೆ ಎಂಬ
ಬಟನ್ ಸಹ ಇದೆ!
ಅಪ್ಪಿ ತಪ್ಪಿ ಅದುಮಿದರೆ,
ದುಡುಕಿದರೆ ಎದುರಿನವರ ಬದಕು ಖಲ್ಲಾಸ್!
ಆಗ ಬದುಕಿಗೂ ಬಂದೂಕಿಗೂ ಏನೂ
ಅರ್ಥವಿಲ್ಲ
ಎಲ್ಲವೂ ಫೈರ್!

ಮೌನ ಎಂದರೆ?

ಅಷ್ಟಕ್ಕೂ ಮೌನ
ಎಂದರೇನು?
ಎಲ್ಲವನ್ನೂ ಸೋಲಿಸುವ
ಒಪ್ಪಿಕಳ್ಳುವ
ಭ್ರಮಿಸುವ
ಅನಿಸುವ
ಕಾಣಿಸುವ
ನಡೆಸುವ
ತಿಳುಸುವ
ಪ್ರಭಾವಿ ಭಾಷ!

ಕರಗೋಲ್ಲವೇ?

ಆತ ನನ್ನೊಂದಿಗೆ
ಮಾತು ಬಿಟ್ಟಿದ್ದಾನೆ
ಕಲ್ಲುಗಳೇ ಕರಗಿ ಹೋಗುತ್ತಿವೆ
ಕಲ್ಲರಳಿ ಹೂವಾಗುತ್ತಿವೆ
ಇನ್ನು ಆ ಮನದಲ್ಲಿನ
ಕೋಪದ ಮಂಜು ಕರಗದೇ
ಇರುವುದ?!

Thursday, November 13, 2008

ನಾವೇನಾಗದ್ವಿ?

ವೈಶಾಖ ಪೂರ್ಣಮಿಯಂದು
ಬುದ್ಧ ಪರಿನಿರ್ವಾಣಗೊಂಡ
ಎಷ್ಟು ಅಮಾವಾಸ್ಯೆ ಬಂದವು?
ಎಷ್ಟು ಪೂರ್ಣಿಮೆ ಬಂದವು?
ನಾವೇನಾಗಿದ್ದೀವಿ?
ಅತ್ತ ಬೆಳಕೂ ಆಗಲಿಲ್ಲ,
ಇತ್ತ ಕತ್ತಲೂ ಆಗಲಿಲ್ಲ
ಕನಸುಗಳ ದಾರಿಯಲಿ
ಮನಸುಗಳ ಮೆರವಣಿಗೆ
ಆಗುತ್ತಿದೆ ಅಷ್ಟೆ!
ಈ ಉತ್ಸವಕ್ಕೆ ಏನು ಹೆಸರು?!

ಸ್ನೇಹ

ಮನದ ಮೈತ್ರಿ
ಯಾವಾಗಲೂ ಜೊತೆಗಿರುತ್ರೀ
ಜೊತೆಯಲ್ಲೇ ತಿರುಗುತ್ತಿರುತ್ರೀ!

ಪ್ರೀತಿ

ಖಾಲಿ ಮನಸಿನ
ಪುಟದ ಮೇಲೆ
ಅಚ್ಚಾಗೋ ಒಲವಿನ ಅಕ್ಷರ!

ಆಗುತ್ತದೆ

ಏನು ಮಾಡದಿದ್ದರೂ ಎಲ್ಲವೂ ಆಗುತ್ತದೆ!
ಹೇಗಿದ್ದರೂ ಆಗುತ್ತದೆ
ಎಂದು ಸುಮ್ನಿರಬಾರದು!
ಹಾಗೆಂದು ಸುಮ್ ಸುಮ್ನೆ
ಏನೂ ಮಾಡಲೂ ಬಾರದು!
ಸುಮಾರಾಗಿ ಆದರೂ ಏನಾದರೂ
ಮಾಡಿದರೂ ಸುಮಾರು!

ಕನಸು

ಕತ್ತಲೆ ಲೋಕದ
ವಿಸ್ಮಯ!

ಬೆಂಕಿಯಲ್ಲಿಯೇ ಬದುಕು!

ಬೀಡಿ ಸಿಗರೇಟಿಗೆ ಗೊತ್ತಿಲ್ಲ
ತಾನು ಸೇವಿಸುವವರ ಆರೋಗ್ಯಕ್ಕೆ ಹಾನಿಕರ ಎಂದು
ಸುಟ್ಟು ಹೋಗುತ್ತದ ಎರಡು
ಬೆರಳುಗಳ ನಡುವೆ ಎರಡು ನಿಮಿಷದಲ್ಲಿ...
ಅವಕ್ಕೆ ವರುಷವೆಲ್ಲಾ ಕಿಚ್ಚಿನ ಸಂಭ್ರಮ!
ಉರಿದು ಉರಿದು ಹೊಗೆಯಾಗುತ್ತವೆ..!
ಅವುಗಳಿಗೆ ಬೆಂಕಿಯಲ್ಲಿಯೇ ಬದುಕು
ಸುಟ್ಟು ಸುಟ್ಟು ಸಾಯುತ್ತಿರಬೇಕು!

ಅಳು!

ಯಾರಿಗೆ ಗಾತ್ತಾಗುತ್ತದೆ?
ಮಳೆ ಸುರಿಯುತ್ತಿದೆ...
ಪ್ರತಿ ಹನಿಯೊಳಗೂ ಮೋಡ ಕಳೆದುಕಂಡ ಅಳು!
ಯಾರಿಗೆ ಗೊತ್ತಾಗುತ್ತೆ ಹೇಳು?!

ಏನು ಹೆಸರು?

ಪ್ರೀತಿ ಇಲ್ಲದ ಮೇಲೆ
ಜೀವನಕ್ಕೆ ಏನು ಹೆಸರು?

ಹೆರಿಗೆ ಇಲ್ಲ!

ನನ್ನ ಕನಸುಗಳ ಬಸುರಿಗೆ
ಹೆರಿಗೆ ಆಗುವುದೇ ಇಲ್ಲ!
ಎಚ್ಚರ ಎಂಬ ಭ್ರೂಣ ಹತ್ಯೆಗೆ
ಶಿಕ್ಷೆ ವಿಧಿಸುವವರು ಯಾರು?
ಅದಕ್ಕೆ ಕಾಯ್ದೆ ಎಲ್ಲಿದೆ?
ನಿದ್ರೆ ಬರುತಿರಲೂ ಬೇಕು,
ಎಚ್ಚರ ಆಗುತ್ತಿರಲೂ ಬೇಕು
ಕನಸುಗಳೂ ಬೇಕು;
ಕನಸಲ್ಲೇ ಸೊಗಸು ಕಾಣಬೇಕು!

ಏನು ಸಂಬಂಧ?

ಗಾಳಿಗೂ ಹೂವುಗಳಿಗೂ ಏನು ಸಂಬಂಧ?!
ನಲುಗುತ್ತವೆ; ಅಲುಗುತ್ತವೆ; ನಲಿಯುತ್ತವೆ
ಮುಟ್ಟದೆಯೂ; ನೋಡದೆಯೂಪ್ರೀತಿ ಮಾಡುತ್ತಿವೆ!

ತಮಟೆ ಬಾರಿಸುವವರಾಗಬೇಕು!

ತಮಟೆ ಬಾರಿಸುವವರಾಗಬೇಕು ನಾವು;
ಸತ್ತವರ ಮುಂದೆಯೂ ಕಾಯಕ ನಿಷ್ಠ
ಮರೆಯುವುದಿಲ್ಲ ಅವರು?!
ಜೀವನದ ಭವಿಷ್ಯದ ತಮಟೆ
ಬಾರಿಸುತ್ತಲೇ ಇರುತ್ತಾರೆ;
ಹೊಟ್ಟೆ ಹೊರೆಯುತ್ತಿರುತ್ತಾರೆ!

Tuesday, November 11, 2008

ಕಳೆದು ಹೋಗಿದ್ದೆ...

ಕಳೆದು ಹೋಗಿದ್ದೆ...!
ಬೆಳಗ್ಗೆಯಾದರೆ ಕೆಲಸ ರಾತ್ರಿಯಾದರೆ ನಿದ್ರೆಇಷ್ಟು ಬಿಟ್ಟು ಬೇರೆ; ಕೇಳಬೇಡಿ
ಏನಾದರು ಬರೆಯಬೇಕುನಿಮ್ಮೊಟ್ಟಿಗೆ ಮಾತಾಡಬೇಕುಅನುಭವ, ಭಾವನೆ ಹಂಚಿಕೊಳ್ಳಬೇಕು ಎಂಬ ಆಸೆಈ 'ಭಗಿವನಮೈದಳೆದು ನಿಲ್ಲಲು ಕಾರಣಇನ್ನು ಇಲ್ಲಿ ಬರವಣಿಗೆಯ ಗಿಡ ಬೆಳೆಯುತ್ತೇನೆ....

ದೀಪ ಬೇಡ !

ದೀಪಾವಳಿಗೆ ದೀಪ ಬೇಡ; ನಿನ್ನ ಸೌಂದರ್ಯದ ಕಾಂತಿಗಿಂತ ದೀಪ ಬೇಕೆ?!