Thursday, December 4, 2008

ಅಯ್ಯಪ್ಪಸ್ವಾಮಿ ಎಂದರೆ ಆಕೆ ನೆನಪಾಗುತ್ತಾರೆ...!


ಮತ್ತೊಂದು `ಅಯ್ಯಪ್ಪನ ಋತು' ಬಂದಿದೆ. ಈ ಸಂದರ್ಭದಲ್ಲಿ ನಮ್ಮೂರಿನಲ್ಲಿ ನಡೆದ ದುರಂತ ಕಥೆ ನೆನಪಾಗುತ್ತದೆ; ಕಾಡುತ್ತದೆ. ಆಗ ಆಕೆ ನೆನಪಾಗುತ್ತಾರೆ!
ಏನಾಗಿತ್ತು ಎಂದರೆ - ಅದೊಂದು ಪುಟ್ಟ ಕುಂಟುಂಬ. ಯಜಮಾನ ಜಯಣ್ಣ ನಾಲೆಯಲ್ಲಿ ನೀರು ಬಿಡುವ ಕೆಲಸ ಮಾಡುವವನು- ಸರ್ಕಾರಿ ಕೆಲಸ. ಪತ್ನಿ ಗೃಹಿಣಿ. ಒಂದು ಗಂಡು- ಒಂದು ಹೆಣ್ಣು. ಶಾಲೆಗ ಹೋಗುತ್ತಿದ್ದವು.
ಈಚೆಗೆ ಸುಮಾರು ೯-೧೦ ವರ್ಷಗಳ ಹಿಂದಿನ ಕಥೆ ಅದು. ಅವರ ಮನೆಯಲ್ಲಿ ಸಂಭ್ರಮವಿತ್ತು; ಭಕ್ತಿಯೂ ಇತ್ತು. ಮನೆಯವರು ಶಬರಿಮಲೆಗೆ ಹೋಗುತ್ತಿದ್ದಾರೆ. ಹಲವಾರು ದಿನಗಳಿಂದ ಮನೆಯ ಸಹವಾಸಕ್ಕೆ ಬಂದೇ ಇಲ್ಲ. ಭಕ್ತಿಯಲ್ಲಿ ಮಿಂದುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ. ಭಜನೆ ಮಾಡುತ್ತಾರೆ.
ದೇವರು ಕೊನೆಗೂ ಭಕ್ತಿ ಭಾವನೆ ಬೆಳೆಸಿದ್ದಾನೆ ಎಂದು ಆಕೆ ಖುಷಿ ಪಟ್ಟಿದ್ದರು. ಊರಿನಲ್ಲಿ ಯಾರ ಸಹವಾಸಕ್ಕೂ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದ ಅವರು, ಮಾಲೆ ಧರಿಸಿದ್ದ ಸಂದರ್ಭದಲ್ಲಿ ಮತ್ತಷ್ಟು ಮೌನಿಯಾಗಿದ್ದರು.
ಅಂತೂ ಒಂದು ವಾರ ಕಳೆದಿತ್ತು. ಇರುಮುಡಿಯನ್ನು ಕಟ್ಟಲು ಭರ್ಜರಿಯಾಗಿ ಕಾರ್ಯಕ್ರಮವೂ ನಡೆಯಿತು. ಸಂಬಂಧಿಕರು, ಮನೆಮಂದಿ ಎಲ್ಲಾ ಶುಭ ಹಾರೈಸಿ ಅವರನ್ನು ಶಬರಿಮಲೆ ಬಸ್ಸು ಹತ್ತಿಸಿದ್ದರು. ಇತ್ತ ಮಕ್ಕಳು, ನಮ್ಮಪ್ಪ ಶಬರಿಮಲೆಗೆ ಹೋಗಿದ್ದಾರೆ. ಒಂದಷ್ಟು ಆಟಿಕೆಗಳು, ಬಟ್ಟೆ ಬರೆ, ತಿನಿಸುಗಳನ್ನು ತರಬಹುದು ಎಂಬ ಕಾತರದಲ್ಲಿ ದಾರಿ ಕಾಯುತ್ತಿದ್ದರು. ಅಬ್ಬಬ್ಬಾ ಎಂದರೆ ಒಂದು ವಾರ ಕಾಲ ಪ್ರವಾಸವಿರುತ್ತದೆ. ನಂತರ ಬರುತ್ತೇನೆ ಎಂದು ಹೇಳಿ ಹೋಗಿದ್ದರು ಆತ.
ವಾರವಾಯಿತು. ಹತ್ತು ದಿನವಾಯ್ತು. ಅರ್ಧ ತಿಂಗಳಾಯ್ತು. ತಿಂಗಳೂ ತುಂಬಿತು. ಜಯಣ್ಣನ ಸುಳಿವಿಲ್ಲ. ಸಂಪರ್ಕಕ್ಕೆ ದೂರವಾಣಿ ಇಲ್ಲ. ಮೊಬೈಲ್ ಅಂತೂ ದೂರದ ಮಾತು. ಅವರ ಪತ್ನಿಗೆ ಗಾಬರಿಯಾಯಿತು. ಗಂಡ ಏನಾದರೋ ಏನೋ? ಶಬರಿ ಮಲೆಗೆ ಹೋಗಿ ಬರುವುದಾಗಿ ಹೇಳಿದವರು ತಿಂಗಳಾದರೂ ಬಂದಿಲ್ಲ; ಅವರ ಸಂಕಟ ಆರಂಭವಾಗಿದ್ದೇ ಅಂದಿನಿಂದ. ಹುಡುಕಿದರು. ಹುಡುಕಿಸಿದರು. ಪೊಲೀಸರಿಗೆ ದೂರು ನೀಡಿದರು. ಸಂಬಂಧಿಕರಂದಿಗೆ ಶಬರಿಮಲೆಗೂ ಹೋಗಿ ಬಂದದ್ದಾಯಿತು. ಅಷ್ಟೊಂದು ಭಕ್ತರಿರುವ
ಶಬರಿಮಲಯಲ್ಲಿ ಜಯಣ್ಣರೊಬ್ಬರನ್ನು ಹುಡುಕುವುದು ಸುಲಭವೇನಲ್ಲ. ಎಷ್ಟು ದಿನವೆಂದು ಅಳುತ್ತಾ ಕೂರಲಾಗುವುದು? ಅಳುವುದಕ್ಕೆ ಕಣ್ಣೀರು ಸಹ ಇರಲಿಲ್ಲ; ದಿನ ಅಳುವವರಿಗೆ ಕಣ್ಣೀರು ಉತ್ಪತ್ತಿ ಮಾಡುವವರ್‍ಯಾರು?
ದಿನ ಕಳೆದವು. ಮೂರು ತಿಂಗಳಾಯಿತು, ವರ್ಷವಾಯಿತು. ಊರಿನವರೆಲ್ಲಾ ಅವರ ಸ್ಥಿತಿ ಕಂಡು ಮರುಗಿದರು. ಮುಖಂಡರು ಸಂಗತಿಯನ್ನು ನೀರಾವರಿ ಇಲಾಖೆಯ ಗಮನಕ್ಕೆ ತಂದರು. ಕಾಡಿಬೇಡಿದ್ದರಿಂದಾಗಿ, ಪತಿಯ ಕೆಲಸ ಪತ್ನಿಗೆ ಸಿಕ್ಕಿತು. ಗಂಡ ಬದುಕಿದ್ದಾನೋ, ಸತ್ತಿದ್ದಾನೋ ಏನೋ ಎಂಬ ಗೊಂದಲದಲ್ಲಿ ಇರುವ ಆಕೆ ಯಾವಾಗಲೂ ಮುಡಿ ತುಂಬ ಹೂವು ಮುಡಿಯುತ್ತಾರೆ. ಆಕೆಗೆ ನೀರಾವರಿ ಇಲಾಖೆಯು ಮೈಸೂರು ಕಚೇರಿಯಲ್ಲಿ ಸಹಾಯಕಿಯ ಕೆಲಸ ನೀಡಿದೆ.
ಈ ಎಲ್ಲದರ ನಡುವೆ ಮಕ್ಕಳು ಅಪ್ಪ ಏನಾದನೋ ಎಂಬ ಚಿಂತಯಲ್ಲಿಯೇ ಬೆಳೆದು ದೊಡ್ಡವರಾಗಿದ್ದಾರೆ. ಒಂದಷ್ಟು ಓದಿಕಂಡು, ತಾಯಿಯೊಂದಿಗೆ ಕುಟುಂಬ ನಿರ್ವಹಣೆಗೆ ಕೈಜೋಡಿಸಲು ಕೈಲಾದ ಕೆಲಸ ಮಾಡುತ್ತಿದ್ದಾರೆ. ಆಕೆ, ಸಹಾಯಕಿ ಕೆಲಸ ಮಾಡಿಕಂಡೇ ಜೀವನ ಸಾಗಿಸುತ್ತಿದ್ದಾರೆ. ಬೆಳೆದು ನಿಂತ ಮಗಳ ಮದುವೆ ಮಾಡಿ ಮುಗಿಸಿದ್ದಾರೆ. ಮಗ ಇದ್ದಾನೆ. ಮುರುಗೇಶ. ಸಹಜವಾಗಿಯೇ ಆತ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಇದ್ದಾನೆ. ಆಗಾಗ ಬಂದು ತಾಯಿಯನ್ನು ನೋಡಿ ಹೋಗುತ್ತಾನೆ. ಆಕೆಯ ಅಕ್ಕನಿಗೂ ಒಂದು ಮಗುವಾಗಿದೆ.
ಮಗ-ಮಗಳು ಬೆಳೆದು ದೊಡ್ಡವರಾಗಿದ್ದಾರೆ. ಮಗಳಿಗೆ ಮದುವೆಯೂ ಆಗಿದೆ. ಮೊಮ್ಮಗು ಸಹ ಇದೆ. ಆದರ, ಜಯಣ್ಣನ ಸುಳಿವಿಲ್ಲ! ಆಕೆ, ಕೆಲಸ ಮಾಡುತ್ತಿದ್ದಾರೆ- ಪತಿಯ ನೆನಪಿನಲ್ಲಿ- ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂಬ ಭಾವನೆಯಲ್ಲಿ! ಜಯಣ್ಣ ಏನಾದನೋ? ಎಲ್ಲಿ ಹೋದನೋ ಇನ್ನೂ ಗೊತ್ತಿಲ್ಲ. ಆದರೆ, ಅವರ ಕುಟುಂಬ ಮಾತ್ರ ಅವರು ಬರುತ್ತಾರೆ ಎಂದು ನಂಬಿದೆ. ಊರಿನವರು ಮಾತ್ರ ಆತನ ಕಥೆ ಮುಗಿದು ಹೋಗಿದೆ ಎಂದುಕೊಂಡಿದ್ದಾರೆ.
ಇಂತಹ ಕಥೆ ಕೇಳಿದರೆ, ಮನಸ್ಸು ಒದ್ದೆಯಾಗದೆ ಇರಲಿಕ್ಕಿಲ್ಲ. ಡಿಸೆಂಬರ್- ಜನವರಿ ಬಂತೆಂದರೆ ಈ ಘಟನೆ ಮನಸ್ಸು ತಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ- ನಿನ್ನ ನೋಡಲು ಬಂದ ಭಕ್ತರಿಗೆ ಈ ಶಿಕ್ಷ ನೀಡುವುದೇ ಎಂಬ ಪ್ರಶ್ನೆ ಬರುತ್ತದೆ. ಅಯ್ಯಪ್ಪ ಉತ್ತರಿಸುತ್ತಾನಾ?! (ನಮ್ಮ ಹರೀಶಣ್ಣ ಅಯ್ಯಪ್ಪಸ್ವಾಮಿ ಕಾಣಲು ಶಬರಿಮಲೆಗೆ ಹೋಗಿದ್ದಾರೆ. ಸುಖವಾಗಿ ಇದ್ದು ಬರಲಿ ಎಂಬ ಆಶಯದಲ್ಲಿ ಬರೆದದ್ದು...)

1 comment:

Anonymous said...

dhanyavadagalu guruve nanna blog melina preeti munduvreyali